ಗುಲಾಬಿ

ರೋಸೆóೀಸೀ ಕುಟುಂಬಕ್ಕೆ ಸೇರಿದ ಸುಂದರವಾದ, ಜನಪ್ರಿಯವಾದ ಅಲಂಕಾರಸಸ್ಯ (ರೋಸ್ó).  ವೈಜ್ಞಾನಿಕ ಹೆಸರು ರೋಸó.  ವಿವಿಧ ಬಣ್ಣಗಳಿಂದ ಕೂಡಿದ ಅತಿ ಚೆಲುವಾದ ಹೂಗಳನ್ನು ಬಿಡುವುದರಿಂದ ಇದು ಅಲಂಕಾರ ಸಸ್ಯಗಳಲ್ಲೆಲ್ಲ ಅತ  ಪ್ರಸಿದ್ಧವಾದುದೂ ಜನಪ್ರಿಯವಾದುದೂ ಆಗಿದೆಯಲ್ಲದೆ ಉದ್ಯಾನಗಾರಿಕೆಯಲ್ಲಿ ಬಹು ಹಿಂದಿನಿಂದಲೂ ಬಳಕೆಯಲ್ಲಿದೆ.  ತನ್ನ ಹೂಗಳ ಅಪ್ರತಿಮ ಸೌಂದರ್ಯದಿಂದಾಗಿ ಗುಲಾಬಿ ಹೂಗಳ ರಾಣಿ ಎನಿಸಿಕೊಂಡಿದೆ.  ಹೇನ್ಸ್ ಹೇಳಿದ ಹಾಗೆ ಯಾವಾಗ ಮೊಟ್ಟಮೊದಲ ಬಾರಿಗೆ ಮಾನವ ಗುಲಾಬಿಯನ್ನು ನೋಡಿ ಇದರ ಮಧುರವಾದ ವಾಸನೆಯನ್ನು ಸವಿದನೋ ಆಗಿನಿಂದಲೂ ಅವನ ಮನಸ್ಸನ್ನು ಇದು ಸೆರೆಹಿಡಿದುಬಿಟ್ಟಿದೆ.  ಪ್ರಪಂಚದ ಸಮಶೀತೋಷ್ಣ ವಲಯದ ಉತ್ತರ ಭಾಗದ ದೇಶಗಳಲ್ಲೂ ಮೆಕ್ಸಿಕೊ, ಭಾರತ  ಮುಂತಾದ ದೇಶಗಳ ಉನ್ನತ  ಪ್ರದೇಶಗಳಲ್ಲೂ ಇದರ ಬೇಸಾಯ ಉಂಟು.

ಗುಲಾಬಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಬೇಸಾಯದಲ್ಲಿತ್ತೆಂದು ತಿಳಿದು  ಬಂದಿದೆ.  ಪುರಾಣದ ಕಥೆಗಳಲ್ಲಿ, ಕಾವ್ಯಗಳಲ್ಲಿ ಇದರ ಉಲ್ಲೇಖ ಉಂಟು.  ಸಂಸ್ಕೃತದಲ್ಲಿ ಇದಕ್ಕೆ ತರುಣಿಪುಷ್ಪ, ಅತಿಮಂಜುಲ,  ಸೇಮಂತಿಕ ಮುಂತಾದ ಹೆಸರುಗಳಿವೆ.  ಮೊಗಲರಿಗೆ ಗುಲಾಬಿ ಅತಿಮೆಚ್ಚಿನ ಹೂವಾಗಿತ್ತು.

ಗ್ರೀಕರ ಮತ್ತು ರೋಮನರ ಪುರಾಣಗಳ ಪ್ರಕಾರ ಗುಲಾಬಿ ಪ್ರೇಮ ಮತ್ತು ಸೌಂದರ್ಯದೇವತೆಯ ಮೆಚ್ಚಿನ ಹೂ.  ಬಾಟಿಸೆಲಿಯ ಸುಪ್ರಸಿದ್ಧ ಕಲಾಕೃತಿಯಾದ "ವೀನಸ್ ದೇವತೆಯ ಜನನ" ಎಂಬುದರಲ್ಲಿ ವೀನಸಿನ ಜನನದೊಂದಿಗೆ ಗುಲಾಬಿ ಹೂವೂ ಉದ್ಭವಿಸುತ್ತಿರುವಂತೆ ತೋರಿಸಲಾಗಿದೆ.  ಪ್ರೇಮ ಮತ್ತು ಪ್ರಣಯಗಳಲ್ಲಿ ಗುಲಾಬಿ ಬಹುಮುಖ್ಯ ಪಾತ್ರವಹಿಸುತ್ತದೆ.  ಗುಲಾಬಿ ಹೂವನ್ನು ಒಬ್ಬ ಸುಂದರ ಯುವತಿಗೆ ಹೋಲಿಸಲಾಗಿದ್ದು ಅವಳು ತನ್ನ ಪ್ರಣಯಿಯಾದ ಜೆóಫಿರ್‍ನನ್ನು ಮುತ್ತಿಡಲೋಸುಗವೆಂಬಂತೆ ತನ್ನ ದಳಗಳನ್ನು ಅರಳಿಸುತ್ತಾಳೆಂದು ಹೇಳಲಾಗಿದೆ.  ರೋಮನರು ಗುಲಾಬಿಯನ್ನು ಬಹಳವಾಗಿ ಮೆಚ್ಚುತ್ತಿದ್ದರು.  ಆಂಟೋನಿ ತನ್ನ ಬಳಿಗೆ ಬಂದಿದ್ದಾಗ ಈಜಿಪ್ಟಿನ ಕ್ಲಿಯೋಪಾತ್ರ ಮೊಣಕಾಲಿನಷ್ಟು ಆಳಕ್ಕೆ ಗುಲಾಬಿ ಹೂಗಳನ್ನು ಹರಡಿಸಿದ್ದಳಂತೆ.  ಗುಲಾಬಿಯ ಬಗ್ಗೆ ಸಂಗೀತ  ಮತ್ತು ಕಾವ್ಯಗಳಲ್ಲಿಯೂ ಉಲ್ಲೇಖವಿದೆ. ಸೌಂದರ್ಯ, ಪ್ರೇಮ ಹಾಗೂ ಪರಿಪೂರ್ಣತೆಗಳ ಪ್ರತೀಕವೆನಿಸಿರುವ ಗುಲಾಬಿಯ ಅಂದಚಂದಗಳನ್ನು, ಸುವಾಸನೆಯನ್ನು ಹೊಗಳಿ ರಿಚರ್ಡ್ ಸ್ಟ್ರಾಸ್, ಯೋಹಾನ್ ಸ್ಟ್ರಾಸ್, ಥಾಮಸ್ ಮೂರ್ ಮೊದಲಾದ ಸಂಗೀತಜ್ಞರು ಹಾಡುಗಳನ್ನು ರಚಿಸಿದ್ದಾರೆ. ಹಂಟ್, ಬ್ಲೇಕ್, ಕೀಟ್ಸ್, ಶೆಲಿ ಮುಂತಾದವರು ಕವನಗಳನ್ನು ರಚಿಸಿದ್ದಾರೆ. ಶೇಕ್ಸ್‍ಪಿಯರ್ ತನ್ನ ಹಲವಾರು ಉಪಮಾಲಂಕಾರಗಳಲ್ಲಿ ಗುಲಾಬಿಯ ಹೆಸರನ್ನು ಬಳಸಿದ್ದಾನೆ.  ಇಂಗ್ಲಿಷ್ ಸಾಹಿತ್ಯದಲ್ಲಿ ಮಾತ್ರವಲ್ಲದೆ ಬೇರೆ ಭಾಷಾ ಸಾಹಿತ್ಯಗಳಲ್ಲೂ ಗುಲಾಬಿಯ ವರ್ಣನೆ ಒಂದಿಲ್ಲೊಂದು ಕಡೆ ಬಂದೇ ಇದೆ.  ಪುರಾತನ ಕಾಲದ ಚಿತ್ರಕಲೆಯಲ್ಲಂತೂ ಗುಲಾಬಿಗೆ ಪ್ರಧಾನವಾದ ಸ್ಥಾನವಿತ್ತು.  ಮಿನೋವದ ಅಕ್ಕಸಾಲಿಗರು ತಮ್ಮ ಒಡವೆಗಳ ರಚನಾವಿನ್ಯಾಸದ ಮಾದರಿಗಳಾಗಿ ಗುಲಾಬಿ ಹೂ ಮತ್ತು ಎಲೆಗಳನ್ನು ಬಳಸಿದ್ದಾರೆ. ಹಲವಾರು ರಾಷ್ಟ್ರಗಳು ಗುಲಾಬಿ ಹೂವಿನ ಗುರಿತಿರುವ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿವೆ.  ಗುಲಾಬಿ ಇಂಗ್ಲೆಂಡಿನ ರಾಷ್ಟ್ರೀಯ ಪುಷ್ಪ.  ಇಂದಿನ ಆಧುನಿಕ ಕಾಲದಲ್ಲೂ ಗುಲಾಬಿ ತನ್ನ ಜನಪ್ರಿಯತೆ ಉಳಿಸಿಕೊಂಡೇ ಇದೆ.  ಪ್ರಪಂಚದ ಹಲವಾರು ದೇಶಗಳಲ್ಲಿ ಮನಮೋಹಕ ಗುಲಾಬಿ ತೋಟಗಳಿವೆ.  ಪ್ಯಾರಿಸಿನ ಬಾಯ್ ಡ ಬಲೋನ್‍ನಲ್ಲಿನ ಬಗಾಟೆಲ್ ತೋಟ ಇವುಗಳಲ್ಲೆಲ್ಲ ಅತಿ ಪ್ರಸಿದ್ಧವಾದ್ದು.  ಇದಕ್ಕೆ ಬಹಳ ಸಮೀಪದಲ್ಲಿರುವ ಲಾ ಹೇ ಎಂಬಲ್ಲಿನ ಗುಲಾಬಿ ತೋಟವೂ ಅಷ್ಟೆ. ಯೂರೋಪಿನಲ್ಲಿನ ಎಲ್ಲ ಬಗೆಯ ಗುಲಾಬಿ ಗಿಡಗಳ ಸಂಗ್ರಹ ಇಲ್ಲಿದೆ ಎಂದು ಹೇಳಲಾಗಿದೆ.  ಹಾಗೆಯೇ ಜಿನೀವದಲ್ಲಿನ ಪಾರ್ಕ್ ಲಾ ಗ್ರಾಂಜ್, ಇಂಗ್ಲೆಂಡಿನಲ್ಲಿರುವ ಕ್ವೀನ್ ಮೇರಸ್ ರೋಸ್ ಗಾರ್ಡನ್ (ರೀಜೆಂಟ್ಸ್ ಪಾರ್ಕಿನಲ್ಲಿದೆ), ಐರ್ಲೆಂಡಿನ ರೂಸ್‍ಬರೋದಲ್ಲಿನ ತೋಟ, ಅಮೆರಿಕದಲ್ಲಿನ ಹಾರ್ಟ್‍ಫರ್ಡ್ ಮತ್ತು ಹರ್ಶೆಗಳಲ್ಲಿನ ತೋಟಗಳು, ಭಾರತದಲ್ಲಿ ಪಾಟಿಯಾಲ ಮಹಾರಾಜರ ಗುಲಾಬಿ ತೋಟ-ಇವು ಇತರ ಜಗತ್ಪ್ರಸಿದ್ಧ ಗುಲಾಬಿ ತೋಟಗಳು.  ಭಾರತದ ಗುಲಾಬಿ ಸಂಘ ನವದೆಹಲಿಯ ಸಫ್ದರ್‍ಜಂಗ್ ಬಳಿ ರಾಷ್ಟ್ರೀಯ ಗುಲಾಬಿ ತೋಟವೊಂದನ್ನು ಅಭಿವೃದ್ಧಿ ಗೊಳಿಸಬೇಕೆಂದು ನಿರ್ಧರಿಸಿದೆ.

ಪ್ರಪಂಚಾದ್ಯಂತ ಗುಲಾಬಿ ಬೆಳೆಸುವುದನ್ನು ಉತ್ತೇಜಿಸುವ ಮತ್ತು ಹೊಸ ಗುಲಾಬಿ ಜಾತಿಗಳನ್ನು ಬಿಡುಗಡೆ ಮಾಡುವ ಮುಖ್ಯ ಉದ್ದೇಶಗಳನ್ನುಳ್ಳ ಎರಡು ಅಂತರರಾಷ್ಟ್ರೀಯ ಗುಲಾಬಿ ಸಂಘಗಳಿವೆ.  ಇವೇ ನ್ಯಾಷನಲ್ ರೋಸ್ó ಸೊಸೈಟಿ, ಇಂಗ್ಲೆಂಡ್ ಮತ್ತು ಇಂಟರ್‍ನ್ಯಾಷನಲ್ ರೋಸ್ó ಸೊಸೈಟಿ, ಅಮೆರಿಕ.

ಸಸ್ಯ ವೃತ್ತಾಂತ :  ಗುಲಾಬಿಯ ಬಹುಪಾಲು ಬಗೆಗಳು ಪೊದೆಸಸ್ಯಗಳು.  ಕೆಲವು ಬಳ್ಳಿಗಳೂ ಇವೆ.  ಕಾಂಡದ ಮೇಲೆಲ್ಲ ಕೆಳಗೆ ಬಾಗಿರುವ ವಿಶಿಷ್ಟ ರೀತಿಯ ಮುಳ್ಳುಗಳಿವೆ.  ಸಾಮಾನ್ಯವಾಗಿ ಪುಟ್ಟ ಗಾತ್ರದವಾದ ಇವು ಬಳ್ಳಿಯಂತೆ ಹಬ್ಬುವ ಗುಲಾಬಿ ಬಗೆಗಳಲ್ಲಿ ದೃಢವಾಗಿಯೂ ಉದ್ದವಾಗಿಯೂ ಇವೆ.  ಗುಲಾಬಿ ಗಿಡದ ಎಲೆಗಳು ಸಂಯುಕ್ತ ಮಾದರಿಯವು ; ಪಾರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ.  ಒಂದೊಂದು ಎಲೆಯಲ್ಲೂ 1-11 ಕಿರುಎಲೆಗಳಿವೆ.  ಪ್ರತಿ ಎಲೆಯಲ್ಲಿ ಒಂದು ಅಕ್ಷ (ರೇಕಿಸ್) ಇದೆ.  ಅದರ ತುದಿಯಲ್ಲಿ ಒಂದು ಕಿರುಎಲೆಯೂ ಅದರ ಅಕ್ಕಪಕ್ಕಗಳಲ್ಲಿ ಜೊತೆಜೊತೆಯಾಗಿ ಸಮಾವೇಶಗೊಂಡಿರುವ ಇತರ ಕಿರುಎಲೆಗಳೂ ಇವೆ.  ಎಲೆಯ ಬುಡದಲ್ಲಿ ತೊಟ್ಟಿಗೆ ಅಂಟಿಕೊಂಡಿರುವ ಎರಡು ವೃಂತಪರ್ಣಗಳಿವೆ.  ಗುಲಾಬಿ ಹೂಗಳು ಒಂಟಿಯಾಗಿ, ಇಲ್ಲವೆ ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಮೂಡುತ್ತವೆ.  ವನ್ಯಗುಲಾಬಿಗಳ ಹೂಗಳಲ್ಲಿ ದಳಗಳ ಸಂಖ್ಯೆ 5.  ಉದ್ಯಾನಗಾರಿಕೆಯಲ್ಲಿ ಬೆಳೆಸಲಾಗುವ ಮಿಶ್ರತಳಿಗಳಲ್ಲಿ ದಳಗಳ ಸಂಖ್ಯೆ 5 ಕ್ಕಿಂತ ಹೆಚ್ಚು.  ದಳಗಳ ಬಣ್ಣ ಅಚ್ಚಬಿಳಿ.  ಕೆನೆ, ಹಳದಿ, ನಸುಗೆಂಪು, ಕೆಂಪು, ಕಡುಗೆಂಪು, ಊದಾ ಮುಂತಾಗಿ ವೈವಿಧ್ಯಪೂರ್ಣವಾಗಿದೆ.  ಅಚ್ಚಬಣ್ಣಗಳಲ್ಲದೆ ಬೇರೆ ಬೇರೆ ಬಣ್ಣಗಳ ಮಿಶ್ರಣವನ್ನೂ ಕಾಣಬಹುದು.  ಇತ್ತೀಚೆಗೆ ಕಪ್ಪುಬಣ್ಣದ ಗುಲಾಬಿಯನ್ನೂ ವೃದ್ಧಿಸಲಾಗಿದೆ.  ಗುಲಾಬಿಗೆ ಮಧುರವಾದ ಸುಮಾಸನೆಯು ಉಂಟು.  ಗುಲಾಬಿಯ ಬಣ್ಣ ಎಷ್ಟು ಮನವೋಹಕವೋ ಅದರ ವಾಸನೆ ಅಷ್ಟೇ ಚೇತೋಹಾರಿ.  ಕೇಸರಗಳೂ ಕಾರ್ಪೆಲುಗಳೂ ಅವೆಷ್ಟೊ ; ಇವು ಬಿಡಿಬಿಡಿಯಾಗಿದ್ದು ಪಾತ್ರೆಯಾಕಾರದ ಪುಷ್ಪಪೀಠದ ಒಳಮೈಮೇಲೆಲ್ಲ ಜೋಡಣೆಗೊಂಡಿವೆ.  ಪ್ರತಿ ಕಾರ್ಪೆಲಿಗೂ ಒಂದು ಉದ್ದನೆಯ ಶಲಾಕೆ ಮತ್ತು ಗುಂಡನೆಯ ಶಲಾಕಾಗ್ರ ಇವೆ.  ಒಳಗೆ ಒಂದೇ ಒಂದು ಅಂಡಕವಿದೆ.  ನಿಷೇಚನಕ್ರಿಯೆ ನಡೆದ ಮೇಲೆ ಇಡೀ ಪುಷ್ಪಪೀಠವೇ ಮತ್ತಷ್ಟು ಬೆಳೆದು, ರಸಭರಿತವಾಗಿ ಹಿಪ್ ಎಂಬ ಹೆಸರಿನ ಕಾಯಿ ಆಗುತ್ತದೆ.  ಗುಂಡನೆಯ ಆಕಾರದ ಇದು ಬಲಿತಾಗ ಚೆಲುವಾದ ಬಣ್ಣವನ್ನು ತಳೆಯುತ್ತದೆ.  ಕಾಯಿಗಳ ಬಣ್ಣದಿಂದ ಆಕರ್ಷಿತವಾಗುವ ಹಕ್ಕಿಗಳ ಮೂಲಕ ಬೀಜಪ್ರಸಾರ ನಡೆಯುತ್ತದೆ. 

ಗುಲಾಬಿಯನ್ನು ಮುಖ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು : 
I   ವನ್ಯ (ಬೇಸಾಯದಲ್ಲಿಲ್ಲದ) ಗುಲಾಬಿ
II  ಬೇಸಾಯದಲ್ಲಿರುವ ಗುಲಾಬಿ

I  ವನ್ಯ (ಬೇಸಾಯದಲ್ಲಿಲ್ಲದ) ಗುಲಾಬಿ :  ರೇಡರ್ ಎಂಬವರ ವಿಂಗಡಣೆಯ ಪ್ರಕಾರ ಇದರಲ್ಲಿ ಸುಮಾರು 120 ಜಾತಿಗಳಿವೆ.  ಶೀತ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಇವುಗಳ ವ್ಯಾಪ್ತಿ ಹೆಚ್ಚು.  ನ್ಯೂ  ಮೆಕ್ಸಿಕೊದಿಂದ ಹಿಡಿದು ಉತ್ತರ ಅಮೆರಿಕದ ಉತ್ತರ ಮೇರುವೃತ್ತದ ವರೆಗೂ ಆಫ್ರಿಕದ ಈಶಾನ್ಯ ದಿಕ್ಕಿನ ಅಬಿಸೀನಿಯ, ಹಿಮಾಲಯದ ತಪ್ಪಲು, ಚೀನ ಮತ್ತು ಜಪಾನ್ ದೇಶಗಳ ಪರ್ವತಗಳ ವರೆಗೂ ಇವನ್ನು ಕಾಣಬಹುದು.  ಭಾರತದಲ್ಲಿ ಕಾಣಬರುವ ವನ್ಯಗುಲಾಬಿಗಳ ಮುಖ್ಯ ಪ್ರಭೇದಗಳು ಇವು -

1. ರೋಸó ಎಗ್‍ಲಾಂಟೇರಿಯಾ (ಸ್ವೀಟ್ ಬ್ರಿಯರ್) :  ಇದು ಒಂದು ಸಣ್ಣ ಪೊದೆ.  ಇದರ ಎಲೆಗಳು ದಟ್ಟವಾಗಿವೆ.  

1-3ರ ಗೊಂಚಲುಗಳಲ್ಲಿ ಹೂಗಳು ಅರಳುತ್ತವೆ.  ಹೂಗಳ ಬಣ್ಣ ನಸುಗೆಂಪು.  ಕಾಯಿ ಗುಂಡಗಿದೆ.  ಬಣ್ಣ ರಕ್ತಗೆಂಪು.  ಇಲ್ಲವೆ ಕಿತ್ತಳೆಮಿಶ್ರಿತ ಕೆಂಪು.  ಈ ಬಗೆ ಸಾಮಾನ್ಯವಾಗಿ ಹಿಮಾಲಯದ ಗಿಲ್‍ಗಿಟ್, ಕಾಶ್ಮೀರ ಮತ್ತು ಟಿಬೆಟ್ಟಿನ ಪಶ್ಚಿಮ ಭಾಗಗಳಲ್ಲಿ ವಿಶೇಷವಾಗಿದೆ. 

2. ರೋಸó ಫೀಟಿಡ :  ಇದು ನೇರವಾಗಿ ಮಧ್ಯಮ ಎತ್ತರಕ್ಕೆ ಬೆಳೆಯುವ ಪೊದೆ.  ಇದರ ಮುಳ್ಳುಗಳು ಡೊಂಕಾಗಿಲ್ಲ.  ಹೂ ಹಳದಿ ಬಣ್ಣದ್ದು.  ಅದಕ್ಕೆ ಸುವಾಸನೆಯಿದೆ.  ಹೂಗಳು ಒಂಟೊಂಟಿಯಾಗಿರಬಹುದು ಇಲ್ಲವೆ ಪುಷ್ಪಮಂಜರಿಗಳಲ್ಲಿರಬಹುದು. 

3.  ರೋಸó ಇನ್‍ವೊಲ್ಯೂಕ್ರೇಟ :  ದೃಢಕಾಯವಾಗಿ ಬೆಳೆಯುವ ಪೊದೆ ಇದು.  ಹೂವಿನ ಬಣ್ಣ ಬಿಳಿ.  ಹೂಗಳು ಒಂಟಿಯಾಗಿರಬಹುದು ಅಥವಾ ಗುಂಪುಗಳಲ್ಲಿರಬಹುದು.  ಕಾಯಿಯ ಬಣ್ಣ ಊದಾ.  ಭಾರತದ ಎಲ್ಲಡೆಗಳಲ್ಲೂ ಈ ಬಗೆಯ ವ್ಯಾಪ್ತಿಯಿದೆ.  ಬಂಗಾಳದ ಮೈದಾನಗಳಲ್ಲಿನ ಜೌಗು ಪ್ರದೇಶಗಳಲ್ಲಿದು ಹೆಚ್ಚಾಗಿ ಬೆಳೆಯುತ್ತದೆ. 

4.  ರೋಸó ಲೆಶೆನಾಲ್‍ಟಿಯಾನ :  ಹುಲುಸಾಗಿ ಬೆಳೆಯುವ ಬಳ್ಳಿಯಿದು.  ಕೊಂಬೆಗಳು ಊದಾ ಬಣ್ಣಕ್ಕಿವೆ.  ಮುಳ್ಳುಗಳು ಸಣ್ಣ ಕೊಕ್ಕೆಯಂತಿವೆ.  ಹೂಗಳು ದೊಡ್ಡ ಗಾತ್ರದವು.  ಗೊಂಚಲುಗಳಲ್ಲಿರುವ ಇವಕ್ಕೆ ಸುವಾಸನೆಯೂ ನಸುಗೆಂಪು ಬಣ್ಣವೂ ಇವೆ.  ಕಾಯಿ ಗುಂಡಗಿದೆ.  ಬಣ್ಣ ಕೆಂಪು.  ಪಶ್ಚಿಮಘಟ್ಟ, ನೀಲಗಿರಿ ಮತ್ತು ಪಳನಿ ಬೆಟ್ಟಗಳಲ್ಲಿ ಈ ಪ್ರಭೇದ ಹೆಚ್ಚಾಗಿದೆ. 

5.  ರೋಸó ಲಾಂಜಿಕಸ್ಪಿಸ್ :  ಇದೊಂದು ನಿತ್ಯಹಸಿರಿನ ಬಳ್ಳಿ.  ದೃಢವಾಗಿ ಬೆಳೆಯುತ್ತದೆ.  ಹೂಗಳು ಬಿಳಿಯ ಬಣ್ಣದವು, ಗೊಂಚಲುಗಳಲ್ಲಿ ಇರುತ್ತವೆ.  ಕಾಯಿಗಳು ಗಾಢಕೆಂಪು ಇಲ್ಲವೆ ಕಿತ್ತಳೆ ಬಣ್ಣದವಾಗಿದ್ದು ಗುಂಡಾಗಿವೆ.  ಈ ಜಾತಿಯ ಗುಲಾಬಿ ಖಾಸಿಯ ಮತ್ತು ಮಿಶ್ಮಿ ಬೆಟ್ಟಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  

6.   ರೋಸó ಮ್ಯಾಕ್ರೊಫಿಲ :  ನೇರವಾಗಿ ಬೆಳೆಯುವ ಪೊದೆ ಇದು.  ನಸುಗೆಂಪು ಬಣ್ಣದ ಹೂಗಳನ್ನು ಬಿಡುತ್ತದೆ.   ಹೂಗಳು ಒಂಟಿಯಾಗಿರಬಹುದು ಇಲ್ಲವೆ ಮಂಜರಿಗಳಲ್ಲಿರಬಹುದು.  ಕಾಯಿಯ ಬಣ್ಣ ಕೆಂಪು.  ಉತ್ತರ ಭಾರತದ ಬೆಟ್ಟಗಾಡುಗಳಲ್ಲಿ ಈ ಬಗೆ ಹೆಚ್ಚಾಗಿ ಕಾಣಬರುತ್ತದೆ.  ಪಾಕಿಸ್ತಾನ ಮತ್ತು ಸಿಕ್ಕಿಮ್‍ಗಳಲ್ಲೂ ಇದೆ. 

7.  ರೋಸó ಮಾಸ್ಕೇಟ :  ಇದು ಹುಲುಸಾಗಿ ಬೆಳೆಯುವ ಬಳ್ಳಿ.  ಹೂಗಳ ಬಣ್ಣ ಬಿಳಿ.  ಕಾಯಿ ಕಂದು ಬಣ್ಣದ್ದು.  ಹಿಮಾಲಯದಲ್ಲಿ 1,000-4,700 ಮೀ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. 

8.  ರೋಸó ಓಡರೇಟ :  ಇದು ಕೂಡ ಒಂದು ಬಳ್ಳಿ.  ಇದರಲ್ಲಿ ದಪ್ಪವಾದ ಮತ್ತು ಕೊಕ್ಕೆಯಂಥ ಮುಳ್ಳುಗಳಿವೆ.  ಹೂಗಳ ಬಣ್ಣ ಬಿಳಿ ಅಥವಾ ನಸುಹಳದಿ.  ಹೂಗಳಿಗೆ ಸುವಾಸನೆಯಿದೆ.  ಕಾಯಿಗಳ ಆಕಾರ ಗುಂಡು ಇಲ್ಲವೆ ಪಿಯರ್ ಹಣ್ಣಿನಂತೆ ; ಬಣ್ಣ ಹಳದಿ.  ಬರ್ಮದಿಂದ ಸಿಕ್ಕಿಂ ವರೆಗೆ ಈ ಪ್ರಭೇದದ ವ್ಯಾಪ್ತಿಯುಂಟು. 

9.  ರೋಸó ಸೆರಿಸಿಯ :  ಇದೊಂದು ನೇರವಾಗಿ ಬೆಳೆಯುವ ಪೊದೆ.  ವಿಪರೀತ ಮುಳ್ಳುಗಳಿರುತ್ತವೆ. ಹೂಗಳ ಬಣ್ಣ ಕೆನೆಹಳದಿ.  ಕಾಯಿ ಹೊಳೆಯುವ ಕೆಂಪು ಬಣ್ಣಕ್ಕಿವೆ.  ಹಿಮಾಲಯದ ಕುಮಾಂವ್‍ನಿಂದ ಅಸ್ಸಾಂ ವರೆಗೆ ಇದರ ವ್ಯಾಪ್ತಿ.  

10. ರೋಸ ವೆಬ್ಬಿಯಾನ :  ನೇರವಾಗಿ ಬೆಳೆಯುವ ಪೊದೆಸಸ್ಯ ಇದು.  ಹೂಗಳು ನಸುಗೆಂಪು ಬಣ್ಣದವು.  ಕಾಯಿಗಳ ಬಣ್ಣ ತಿಳಿಗೆಂಪು.  ಇದು ಹಿಮಾಲಯದ ನಿವಾಸಿ.  ಲಡಖ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 
ಮೇಲೆ ತಿಳಿಸಿದ ಪ್ರಭೇದಗಳಲ್ಲಿ ಇನ್‍ವೊಲ್ಯೂಕ್ರೇಟ, ಲೆಶೆನಾಲ್ಟಿಯಾನ, ಲಾಚಿಜಿಕಸ್ಪಿಸ್, ಓಡರೇಟ ಮತ್ತು ವೆಬ್ಬಿಯಾನಗಳು ಭಾರತಕ್ಕೆ ಮಾತ್ರ ಸೀಮಿತವಾಗಿವೆ. 

II  ಬೇಸಾಯದಲ್ಲಿರುವ ಗುಲಾಬಿ :  ಬೇಸಾಯದಲ್ಲಿರುವ ಬಹು ಮುಖ್ಯವಾದ ಪ್ರಭೇದಗಳು ಚೈನೆನ್‍ಸಿಸ್, ಡಮಾಸ್ಕೀನ, ಫೀಟಿಡ, ಗ್ಯಾಲಿಕ, ಜೈಗ್ಯಾಂಷಿಯ, ಮಾಸ್ಕೇಟ, ಮಲ್ಟಿಫ್ಲೋರ ಮತ್ತು ವಿಚೂರೈಯಾನ. 
ಸಾಮಾನ್ಯವಾಗಿ ಇವನ್ನು 19ನೆಯ ಶತಮಾನಕ್ಕಿಂತ ಹಿಂದೆ ಬೇಸಾಯದಲ್ಲಿದ್ದ ಗುಲಾಬಿಗಳು ಮತ್ತು ಅನಂತರ ಬೇಸಾಯಕ್ಕೆ ಬಂದ ಗುಲಾಬಿಗಳು ಎಂದು ಎರಡು ಗುಂಪುಗಳಾಗಿ ವಿಂಗಡಿಸುವುದು ವಾಡಿಕೆ.  ಮೊದಲನೆಯ ಗುಂಪಿಗೆ ರೋ.ಗ್ಯಾಲಿಕ ಮತ್ತು ರೋ.ಡಮಾಸ್ಕೀನಗಳು ಸೇರಿವೆ.  ಗ್ಯಾಲಿಕ ಮತ್ತು ಮಾಸ್ಕೇಟ ಪ್ರಭೇದಗಳನ್ನು ಅಡ್ಡಹಾಯಿಸಿ ಉದ್ಯಾನ ಗಾರಿಕೆಯ ಪರಿಭಾಷೆಯಲ್ಲಿ ನಾಯ್ಸೆಟ್ಸ್ ಮತ್ತು ಬೋರ್ಬನ್ ಎಂದು ಕರೆಯಲಾಗುವ ತಳಿಗಳನ್ನು ಪಡೆಯಲಾಹಿತು.  ಅನಂತರ ವಿವಿಧ ಬಗೆಗಳ ಅಂತರತಳೀಕರಣದಿಂದ ಟೀ ರೋಸóಸ್ ಮತ್ತು ಹೈಬ್ರಿಡ್ ಪರ್‍ಪೆಟ್ಯುವಲ್ಸ್ ಎಂಬ ಎರಡು ಮುಖ್ಯ ಬಗೆಗಳನ್ನು ಅಭಿವೃದ್ದಿಪಡಿಸಲಾಯಿತು.  ಟೀ ರೋಸóಸ್ ಗುಂಪಿನವು ಸದಾ ಹೂ ಬಿಡುವ ಗುಣಕ್ಕೆ ಹೆಸರಾಗಿದ್ದರೆ ಹೈಬ್ರಿಡ್ ಪರ್‍ಪೆಟ್ಯುವಲ್ಸ್ ಬಗೆಯವು ತಮ್ಮ ಹೂಗಳ ಗಾತ್ರಕ್ಕೂ ಮಧರವಾದ ವಾಸನೆಗೂ ಹೆಸರಾಗಿವೆ.  ಆದರೆ ಮೊದಲ ಗುಂಪಿನವು ಎರಡನೆಯವಕ್ಕಿಂತ ಸೂಕ್ಷ್ಮ ಪ್ರಕೃತಿಯವು.  1867ರ ಸುಮಾರಿಗೆ ಫ್ರಾನ್ಸಿನ ಪ್ರಮುಖ ಗುಲಾಬಿ ಬೆಳೆಗಾರ ಗಿಲೋ ಎಂಬಾತ ಇವರೆಡು ಗುಂಪಿನ ಗುಲಾಬಿಗಳನ್ನು ಅಡ್ಡಹಾಯಿಸಿ ಇವೆರಡರ ಅಪೇಕ್ಷಿತ ಲಕ್ಷಣಗಳನ್ನೂ ಪಡೆದಿರುವ ಹೈಬ್ರಿಡ್ ಟೀ ರೋಸóಸ್ ಎಂಬ ಇನ್ನೊಂದು ಗುಂಪನ್ನು ಅಭಿವೃದ್ಧಿ ಪಡಿಸಿದ.  ಹೀಗೆ ಪಡೆಯಲಾದ ಗುಲಾಬಿಗಳಲ್ಲಿ ಮೊಟ್ಟಮೊದಲಿನದು `ಲಾ ಫ್ರಾನ್ಸ್ ಎಂಬುದು.  ಬಲುಬೇಗ ಜನಪ್ರಿಯವಾದ ಈ ತಳಿಯನ್ನು ಇಂದಿಗೂ ಭಾರತದಲ್ಲಿ ಬಿಹಾರ, ಬಂಗಾಳ ಮತ್ತು ಬೆಂಗಳೂರುಗಳಲ್ಲಿ ಬೆಳೆಸುತ್ತಾರೆ.  ಅನಂತರ ಪರ್ನೆಟ್ ಡ್ಯೂಚರ್ ಎಂಬಾತ ರೋಸó ಫೀಟಿಡ ಪ್ರಭೇದವನ್ನು ತನ್ನ ತಳೀಕರಣ ಪ್ರಯೋಗಗಳಲ್ಲಿ ಬೆಳೆಸಿ ಹಳದಿ ಹೂ ಬಿಡುವ ಸೋಲೈಟ್ ಡ ಓರ್ ಎಂಬ ಬಗೆಯನ್ನು ಪಡೆದ. 

ಹೀಗೆ ಹೈಬ್ರಿಡ್ ಟೀ ರೋಸóಸ್ ಪ್ರಾಮುಖ್ಯಕ್ಕೆ ಬರುತ್ತಿರುವಾಗಲೇ ಪಾಲಿಯಾಂತ ಪಾಂಪಾನ್ಸ್ ಅಥವಾ ಡ್ವಾರ್ಫ್ ಪಾಲಿಯಾಂತಾಸ್ ಎಂಬ ಇನ್ನೊಂದು ಗುಂಪು ಜನಪ್ರಿಯವಾಗತೊಡಗಿತು.  ರೋಸó ಪಾಲಿಯಾಂತ (ಈಗ ಇದಕ್ಕೆ ರೋ.ಮಲ್ಟಿಫ್ಲೋರ ಎಂದು ಹೆಸರು)  ಎಂಬುದರಿಂದ ಪಡೆಯಲಾದುವೆಂದು ಹೇಳಲಾದ ಈ ಗುಂಪಿನವು ತಮ್ಮ ಕುಳ್ಳು ಗಾತ್ರಕ್ಕೂ ದೀರ್ಘಕಾಲ ಹೂ ಬಿಡುವ ಗುಣಕ್ಕೂ ಶೀತಸಹಿಷ್ಣುತೆಗೂ ಹೆಸರಾಗಿವೆ. 

1910ರಲ್ಲಿ ಡನ್ಮಾಕಿನ ಗುಲಾಬಿ ಬೇಸಾಯಗಾರನಾದ ಪೌಲ್ಸನ್ ಎಂಬಾತ ಪಾಲಿಯಾಂತ ಮತ್ತು ಹೈಬ್ರಿಡ್ ಟೀ ರೋಸುóಗಳನ್ನು ಅಡ್ಡಹಾಯಿಸಿ ಫ್ಲಾರಿಬಂಡ ಎಂಬ ಹೊಸ ಬಗೆಯ ಗುಲಾಬಿಗಳನ್ನು ಪಡೆದ.  ಇವು ಹೈಬ್ರಿಡ್ ರೋಸುóಗಳಂತೆ ಅಗಾಧ ಸಂಖ್ಯೆಯಲ್ಲಿ ಹೂ ಬಿಡುವವಲ್ಲದೆ ಪಾಲಿಯಾಂತಗಳಂತೆ ಸುಂದರವಾದ ಆಕಾರದ ಹೂಗಳನ್ನು ಬಿಡುತ್ತವೆ. 
ಮೇಲಿನ ಮುಖ್ಯ ಗುಂಪುಗಳಿಗೆ ಮತ್ತು ಇತರ ಕೆಲವು ಬಗೆಗಳಿಗೆ ಸೇರಿದ ಗುಲಾಬಿಗಳನ್ನು ಮುಂದೆ ಸಂಕ್ಷೇಪವಾಗಿ ವಿವರಿಸಲಾಗಿದೆ. 

1. ಟೀ ರೋಸ್ó :  ಟೀ ಸೊಪ್ಪಿನ ವಾಸನೆಯುಳ್ಳ ಹೂಗಳನ್ನು ಬಿಡುತ್ತವೆ.  ಹೇರಳವಾಗಿ ಹೂ ಬಿಡುವ ಬಗೆಗಳೆಂದು ಹೆಸರಾಗಿವೆ.  ಆದರೆ ಹೆಚ್ಚು ಚಳಿಯನ್ನು ಸಹಿಸಲಾರವು. ಉದಾಹರಣೆಗೆ ಲೇಡಿ ಹಿಲಿಂಗ್ಡನ್, ಮಾಲಿ ಶಾರ್ಮನ್ ಕ್ರಾಫರ್ಡ್, ಮಡ್ಯಾಂ ಫಾಲ್ಕಾಟ್. 

2. ಹೈಬ್ರಿಡ್ ಟೀ :  ದೊಡ್ಡ ಗಾತ್ರದ ಹೂ ಬಿಡುವಂಥವು ;  ಗುಲಾಬಿಗಳಲ್ಲೆಲ್ಲ ಹೆಚ್ಚು ಜನಪ್ರಿಯವಾದವು.  ಕ್ರಿಮ್‍ಸನ್ ಗ್ಲೋರಿ, ಪೀಸ್, ಸೂಪರ್ ಸ್ಟಾರ್, ಮ್ಯಾಕ್‍ಗ್ರೆಡೀಸ್ ಸನ್‍ಸೆಟ್ ಮುಂತಾದವು ಹೈಬ್ರಿಡ್ ಟೀಗಳಲ್ಲಿ ಮುಖ್ಯವಾದವು.  ಇವುಗಳಲ್ಲಿ ಕೆಲವು ಬಳ್ಳಿಗಳಂತೆಯೂ ಬೆಳೆಯುತ್ತವೆ. 

3. ಹೈಬ್ರಿಡ್ ಪರ್‍ಪೆಟ್ಯುವಲ್ಸ್ :  ಇವು ತಮ್ಮ ಎತ್ತರದ ಬೆಳೆವಣಿಗೆಗೆ, ಹೂಗಳ ಗಾತ್ರಕ್ಕೆ, ಚೆಲುವಾದ ಆಕಾರಕ್ಕೆ ಹೆಸರಾಗಿವೆ.  ಇವುಗಳಲ್ಲಿ ಜನರಲ್ ಜಾಕ್ವಿಮಿನಾ, ಮಿಸೆಸ್ ಜಾನ್ ಲ್ಯಾಂಗ್ ಮತ್ತು ಪಾಲ್ ನೇಯಾನ್‍ಗಳು ಮುಖ್ಯವಾದ ಉದಾಹರಣೆಗಳು.  

4. ಫ್ಲಾರಿಬಂಡ ಬಗೆಗಳು :  ಹೈಬ್ರಿಡ್ ಟೀ ಮತ್ತು ಪಾಲಿಯಾಂತಗಳ ಮಿಶ್ರತಳಿಗಳಿವು.  ಇವುಗಳ ಹೂಗಳಿಗೆ ವಾಸನೆಯಿರುವುದಿಲ್ಲ.  ಉದಾಹರಣೆಗೆ ರಾಡ್‍ಹೆಟೆ, ಎಲ್ಸಿ ಪೌಲ್ಸನ್, ಕಿಸ್ರ್ಟೆಜನ್ ಪೌಲ್ಸನ್.
5. ದಿ ಡ್ವಾರ್ಫ್ ಪಾಲಿಯಾಂತಾಸ್ :  ಬಹುಸಂಖ್ಯೆಯಲ್ಲಿ ದೀರ್ಘಕಾಲ ಹೂಗಳನ್ನು ಬಿಡುವುದಕ್ಕೆ ಹೆಸರಾದ ಬಗೆಗಳಿವು.  ಬೇಬಿ ಫಾರಾಕ್ಸ್, ಕ್ಯಾಮಿಯೊ, ಸೆಸಿಲ್ ಬ್ರುನರ್, ಚಾಟಿಲಾನ್ ರೋಸ್ó, ಎಕೊ, ಯುವೋನ್ ರೇಬಿಯರ್ ಮುಂತಾದವು ಈ ಬಗೆಗಳಲ್ಲಿ ಕೆಲವು. 

6. ಚೀನ ರೋಸ್ó :  ಅಂಚು ಸಸ್ಯಗಳಾಗಿ ಬೆಳೆಸಲು ಉತ್ತಮವಾದ ಬಗೆಗಳಿವು.  ವರ್ಷದ ಎಲ್ಲ ಕಾಲಗಳಲ್ಲೂ ಹೂ ಬಿಡುತ್ತವೆ.  ಇವಕ್ಕೆ ಬಂಗಾಳದ ಗುಲಾಬಿ, ತಿಂಗಳ ಗುಲಾಬಿ ಎಂಬ ಹೆಸರುಗಳೂ ಉಂಟು.  ಉದಾಹರಣೆಗೆ ಕಾಮ್ಟೆಸಿ ಡು ಕೇಲ,  ಮಡ್ಯಾಂ ಯೂಜೀನ್ ರೆಸಾಲ್, ಬ್ಲಶ್ ಚೈನ.  ಹಸಿರು ಬಣ್ಣದ ಗುಲಾಬಿ ಹೂ ಬಿಡುವ ಬಗೆ ಈ ಗುಂಪಿಗೆ ಸೇರಿದೆ. 

7. ಮಿನಿಯೇಚರ್ :  ಇವು ಈಗ ಬಹಳ ಪ್ರಸಿದ್ಧಿಯಾಗಿರುವ ಪುಟಾಣಿ ಬಗೆಯ ಗುಲಾಬಿಗಳು.  ಇದರ ಎಲೆಗಳೂ ಹೂಗಳೂ ಬಲುಸಣ್ಣವಾಗಿರುತ್ತವೆ.  ಇವು ಅಂಚು ಸಸ್ಯ ಅಥವಾ ಕುಂಡಸಸ್ಯಗಳಾಗಿ ಬೆಳೆಸಲು ಉತ್ತಮವಾದವು.  ಉದಾಹರಣೆಗೆ ಬೇಬಿ ಗೋಲ್ಡ್, ಬೇಬಿ ಮಾಸ್ಕರೇಡ್, ಕೊರಾಲಿನ್, ರೆಡ್ ಇಂಪ್ ಮತ್ತು ಪಿಕ್ಸಿ. 

8. ಡಮಾಸ್ಕ್ ಗುಲಾಬಿಗಳು :  ಕ್ರೈಸ್ತಧರ್ಮಯುದ್ಧದಲ್ಲಿ ತೊಡಗಿದ್ದ ಯೋಧರು (ಕ್ರುಸೇಡರ್ಸ್) ಡಮಾಸ್ಕಸಿನಿಂದ ಹಿಂತೆರಳುವಾಗ ಯೂರೋಪಿಗೆ ಕೊಂಡೊಯ್ದ ಗುಲಾಬಿಗಳಿವು.  ಇವುಗಳ ಹೂಗಳು ಅತ್ಯಂತ ಸುಮಾಸನೆಯಿಂದ ಕೂಡಿವೆ.  ಇವುಗಳಿಂದ ಗುಲಾಬಿಯ ಅತ್ತರನ್ನು ತಯಾರಿಸುತ್ತಾರೆ.  ಈ ಗುಂಪಿನ ಬಹು ಮುಖ್ಯವಾದ ತಳಿಗಳೆಂದರೆ ಸೆಲ್‍ಸಿಯಾನ, ಕಜಾóನ್‍ಲಿಕ್ ಮತ್ತು ಮಡ್ಯಾಂ ಹಾರ್ಡಿ. 

9. ಬೋರ್ಬನ್ ಗುಲಾಬಿಗಳು :  ಡಮಾಸ್ಕ್ ಮತ್ತು ಚೀನ ಗುಲಾಬಿಗಳ ಮಿಶ್ರತಳಿಗಳಿವು.  18ನೆಯ ಶತಮಾನದ ಕೊನೆಯಲ್ಲಿ ರೀ ಯೂನಿಯನ್ ದ್ವೀಪದಲ್ಲಿ ಮೊಟ್ಟಮೊದಲಿಗೆ ಪಡೆಯಲಾಯಿತು.  ಇದರಲ್ಲಿ ಕೂಡ ಸುವಾಸನೆಯಿಂದ ಕೂಡಿದ ಬಗೆಗಳಿವೆ.  ಇವುಗಳಲ್ಲಿ ಎಡ್ವರ್ಡ್, ಬೌಲೆ ಡ ನೈಗೆ, ಹೋನೊರೈನ್ ಡ ಬ್ರಬಾಂಟ್ ಮತ್ತು ಲೂಯಿಸ್ ಓಡಿಯರ್ ಮುಖ್ಯವಾದವು. 

10. ಫ್ರೆಂಚ್ ಗುಲಾಬಿಗಳು :  ಇವಕ್ಕೆ ಗ್ಯಾಲಿಕಾಸ್ ಎಂಬ ಹೆಸರೂ ಇದೆ.  ಇವು ಹೈಬ್ರಿಡ್ ಟೀ ಮತ್ತು ಫ್ಲಾರಿಬಂಡ ಜಾತಿಗಳು ಬರುವುದಕ್ಕೆ ಮುಂಚೆ ಹೆಸರುವಾಸಿಯಾಗಿದ್ದುವು.  ಈ ಜಾತಿಯ ಮುಖ್ಯ ಲಕ್ಷಣವೆಂದರೆ ವಿವಿಧ ಬಣ್ಣದ ಹೂಗಳನ್ನು ಬಿಡುವುದು.  ಉದಾಹರಣೆಗೆ ಅಲೈನ್ ಬ್ಲಾಂಚಾರ್ಡ್, ಬೆಲ್ಲಿಡ ಕ್ರೆಸಿ, ಕಾರ್ಡಿನಲ್ ಡ ರಿಚ್ಲೂ, ರೋಸó ಮುಂಡಿ ಮತ್ತು ವೇರಿಗೇಟ ಡ ಬೊಲೋನ.

11. ಮಸ್ಕ್ ಗುಲಾಬಿಗಳು :  ಇವು ಪೊದೆಯಾಗಿ ಬೆಳೆಯುವಂಥವು.  ಹೂಗಳು ಜೊಂಪೆಗಳಲ್ಲಿರುವುವು.  ಅವುಗಳಿಗೆ ಕಸ್ತೂರಿಯ ವಾಸನೆ ಉಂಟು. ಮಸ್ಕ್ ಗುಲಾಬಿಗಳ ಕೆಲವು ಬಗೆಗಳೆಂದರೆ ಫೆಲಿಸಿಯ, ಪ್ಯಾಕ್ಸ್,  ಪೆನಲಪಿ, ಪ್ರಾಸ್ಟೆರಿಟಿ, ಮತ್ತು ವ್ಯಾನಿಟಿ.  

12. ನಾಯ್ಸೆಟೀ ಗುಲಾಬಿಗಳು :  ಇವು ಮಸ್ಕ್ ಮತ್ತು ಚೀನ ಗುಲಾಬಿಗಳ ನಡುವಣ ಸಂಯೋಗದಿಂದ ಪಡೆದ ಅಡ್ಡತಳಿಗಳು.  ಇವು ಕೆಲವು ಉತ್ತಮ ಬಗೆಯ ಬಳ್ಳಿರೀತಿಯ ಗುಲಾಬಿಗಳನ್ನು ಒಳಗೊಂಡಿರುವುದರಿಂದ ಜನಪ್ರಿಯವಾಗಿವೆ.  ಗ್ಲಾಯರ್ ಡ ಡಿಜಾನ್, ಮಡ್ಯಾಂ ಆಲ್‍ಫ್ರೆಡ್ ಕ್ಯಾರಿಯೆರೆ. 

13. ರೂಗೊಸಾ ಗುಲಾಬಿಗಳು :  ಇವಕ್ಕೆ ಜಪಾನಿನ ಗುಲಾಬಿಗಳು ಎಂಬ ಹೆಸರೂ ಇದೆ.  ಚಳಿಯನ್ನು ತಡೆದುಕೊಳ್ಳುವ ಮತ್ತು ಸಮುದ್ರ ತೀರಗಳಲ್ಲಿರುವ ನಿಸ್ಸಾರದ ಮಣ್ಣಿನಲ್ಲಿಯೂ ಬೆಳೆಯುವ ಸಾಮಥ್ರ್ಯ ಇವಕ್ಕೆ ಉಂಟು.  ಇವುಗಳಲ್ಲಿ ಮುಳ್ಳುಗಳು ಬಹಳ.  ಅಂಚು ಇಲ್ಲವೆ ಪೊದೆಸಸ್ಯಗಳಾಗಿ ಬೆಳೆಸಲು ಉತ್ತಮವಾದವು.  ಉದಾಹರಣೆಗೆ ಫ್ರಾ ಡಾಗ್‍ಮಾರ್ ಹಾಸ್ಟ್ರುಪ್, ಪಿರಿಕ್ ಗೂಟೆನ್‍ಡಾಸ್ರ್ಟ್, ಬ್ಲಾಂಕ್ ಡಬಲ್ ಡ ಕೂಬರ್ಟ್ ಮುಂತಾದವು. 

14. ಸ್ಕಾಟ್ಸ್‍ಬ್ರಿಯರ್ಸ್ :  ಇವನ್ನು ಬರ್ನೆಟ್ ಗುಲಾಬಿಗಳೆಂದು ಕರೆಯುವುದುಂಟು.  ದಟ್ಟಪೊದೆಗಳಂತೆ ಬೆಳೆದುಕೊಳ್ಳುತ್ತವೆ.  ರೋಸó ಸ್ಪಿನೋಸಿಸ್ಸಿಮ ಅಲ್ಟಾಯಿಕ ಎಂಬ ಪ್ರಭೇದ ಇವುಗಳಲ್ಲಿ ಬಹು ಮುಖ್ಯವಾದ್ದು. 

15. ಮಾಡರ್ನ್ ಶ್ರಬ್ಸ್ :  ಈ ಜಾತಿಯನ್ನು ಹಲವಾರು ಬಗೆಗಳ ಗುಲಾಬಿಗಳನ್ನು ಅಡ್ಡತಳಿಯೆಬ್ಬಿಕೆಯಿಂದ ಪಡೆಯಲಾಗಿದೆ.  ಬಹು ಸುಂದರವಾದ ಗುಲಾಬಿಗಳೆಂದರೆ ಫ್ರಿಟ್ಸ್ ನೋಬಿಸ್, ಫ್ರೂಲಿಂಗ್ಸ್‍ಗೋಲ್ಡ್, ಫ್ರೂಲಿಂಗ್ಸ್ ಮಾರ್ಗೆನ್, ಸ್ಪಾರಿಷೂಪ್ ಮತ್ತು ವಿಲ್‍ಹೆಲ್ಮ್.

ಗುಲಾಬಿ ತೋಟದ ವಿನ್ಯಾಸ :  ಗುಲಾಬಿ ಎಲ್ಲಿ ಬೆಳೆದರೂ ಬಹಳ ಸುಂದರವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ.  ಆದರೆ ಹೆಚ್ಚು ಗುಲಾಬಿ ಗಿಡಗಳನ್ನು ಬೆಳೆಸುವಾಗ ಅವು ಆಕರ್ಷಕವಾಗಿ ಕಾಣಲೆಂಬ ಉದ್ದೇಶದಿಂದ ತೋಟದ ವಿನ್ಯಾಸದ ಬಗ್ಗೆ ಗಮನ ಕೊಡಬೇಕು.  ಇದರಿಂದಾಗಿ ಗುಲಾಬಿ ತೋಟವನ್ನು ವೃದ್ಧಿಸುವಾಗು ಕೆಳಗೆ ತಿಳಿಸಿರುವ ಅಂಶಗಳನ್ನು ಗಮನಿಸಬೇಕು. 

1. ಗುಲಾಬಿಗೆ ಹೆಚ್ಚು ಬೆಳಕು ಬೇಕು.  ಕೊನೆಯ ಪಕ್ಷ ಅರ್ಧದಿನಾವಧಿಯ ಬೆಳಕು ಅವಶ್ಯಕ.  ಅದರಲ್ಲೂ ಮುಂಜಾವಿನ ಬೆಳಕು ಉತ್ತಮ.  ಮಧ್ಯಾಹ್ನದ ಸೂರ್ಯನ ಪ್ರಖರವನ್ನು ಇದು ತಡೆಯಲಾರದು.  ಆದ್ದರಿಂದ ಆಗ ನೆರಳಿದ್ದರೆ ಅನುಕೂಲ. 

2. ಗುಲಾಬಿ ಗಿಡಗಳನ್ನು ಮರಗಳ ಹತ್ತಿರವಾಗಲಿ, ಗೋಡೆಗಳ ಪಕ್ಕದಲ್ಲಾಗಲಿ ಬೆಳೆಸುವುದು ಸೂಕ್ತವಲ್ಲ.  ಏಕೆಂದರೆ ಇದರಿಂದ ಹೆಚ್ಚು ನೆರಳು ಬೀಳುವುದಲ್ಲದೇ ಮರ ತನ್ನ ಆಹಾರಕ್ಕಾಗಿ ಗುಲಾಬಿಯೊಂದಿಗೆ ಸ್ಫರ್ಧಿಸುವುದುಂಟು.  ಹೀಗಾಗಿ ಗುಲಾಬಿಯ ಬೆಳೆವಣಿಗೆ ಕುಂಠಿತವಾಗುತ್ತದೆ. 

3. ಗುಲಾಬಿ ಅತಿ ತೇವವನ್ನು ಸಹಿಸುವುದಿಲ್ಲ.  ಇದರಿಂದಾಗಿ ಪಾತಿಗಳಲ್ಲಿ ನೀರು ಚೆನ್ನಾಗಿ ಬಸಿದುಹೋಗುವಂತಿರಬೇಕು. 

4. ಕೆಲವು ಸಲ ಗುಲಾಬಿ ಬಿರುಸಾದ ಗಾಳಿಯಿಂದ ಹಾನಿಗೊಳಗಾಗುವ ಸಂಭಾವ್ಯತೆ ಇರುವುದರಿಂದ ಅದನ್ನು ತಡೆಯುವುದಕ್ಕೆ ತೋಟದ ಸುತ್ತಲೂ ಬೇಲಿ ಅಥವಾ ಸಾಲುಮರಗಳನ್ನು ನೆಡಬೇಕು. 

5. ಗುಲಾಬಿಯನ್ನು ಇತರ ಸಸ್ಯಗಳೊಂದಿಗೆ ನೆಡದೆ ಬೇರೆ ನೆಡುವುದೇ ಉತ್ತಮ. 

6. ಗುಲಾಬಿ ತೋಟವನ್ನು ರೂಪಿಸುವಾಗ ತೋಟ ಸುಂದರವಾಗಿ ಕಾಣುವುದೊಂದೇ ಅಲ್ಲದೆ, ಕಳೆ ತೆಗೆಯುವುದಕ್ಕೆ, ಆಗಿಂದಾಗ್ಗೆ ಗಿಡಗಳನ್ನು ಸಮರುವುದಕ್ಕೆ ಅನುಕೂಲವಾಗುವಂತಿರಬೇಕು. 

7 ತೋಟದ ವಿನ್ಯಾಸ ಪೂರ್ಣಗೊಂಡ ಮೇಲೆ ಗುಲಾಬಿಯ ಬಗೆಗಳನ್ನು ಆಯುವುದು ಕೂಡ ಬಹಳ ಮುಖ್ಯ.	
ಗುಲಾಬಿಯ ವೃದ್ಧಿ : ಗುಲಾಬಿಯನ್ನು ಬೀಜಗಳಿಂದ, ಕಾಂಡದ ತುಂಡುಗಳಿಂದ ಲೇಯರ್ ಮಾಡುವುದರಿಂದ, ಕಣ್ಣುಕಸಿ ಮತ್ತಿತರ ಕಸಿ ಮಾಡುವಿಕೆಯಿಂದ ವೃದ್ಧಿ ಮಾಡಬಹುದು.
	
ಹೊಸ ತಳಿಗಳನ್ನು ಪಡೆಯಲು ಬೀಜಗಳಿಂದ ಮಾತ್ರ ಸಾಧ್ಯ.  ಕೆಲವು ಸಲ ಶೀತವಲಯದಲ್ಲಿ ವನ್ಯಜಾತಿಯ ಬೀಜಗಳನ್ನು ನೆಟ್ಟು ಬೆಳೆಸಿದ ಸಸ್ಯಗಳನ್ನು ಕಣ್ಣುಕಸಿ ವಿಧಾನದಲ್ಲಿ ಬೇರು ಸಸ್ಯವಾಗಿ ಉಪಯೋಗಿಸುತ್ತಾರೆ.
ಕಾಂಡತುಂಡುಗಳಿಂದ ವೃದ್ಧಿ ಮಾಡುವಾಗ ಹದವಾಗಿ ಬಲಿತ ಮತ್ತು ಹಸಿರಾಗಿರುವ ತುಂಡುಗಳನ್ನು ಆಯಬೇಕು.  ಆಯ್ಕೆಮಾಡಿದ ತುಂಡಿನ ಕೆಳಭಾಗದಲ್ಲಿ ಓರೆಯಾಗಿ ಕತ್ತರಿಸಬೇಕು.  ತುಂಡಿನ ಮೇಲ್ಭಾಗದಲ್ಲಿನ ಸುಮಾರು 2 - 3 ಎಲೆಗಳನ್ನು ಬಿಟ್ಟು ಉಳಿದ ಎಲ್ಲ ಎಲೆಗಳನ್ನು ತೆಗೆದುಹಾಕಬೇಕು.  ಅನಂತರ ಮರಳಿನ ಮಡಿಗಳನ್ನು ಮಾಡಿ ತುಂಡುಗಳನ್ನು 4 ಆಳಕ್ಕೆ  ನೆಡಬೇಕು.  ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಪಾಶ್ರ್ವ ನೆರಳನ್ನು ಒದಗಿಸಿ ಆಗಾಗ್ಗೆ ಎಚ್ಚರಿಕೆಯಿಂದ ನೀರು ಹಾಕುತ್ತಿರಬೇಕು.  ನೆಟ್ಟ ಒಂದು ತಿಂಗಳ ಅನಂತರ ತುಂಡುಗಳು ಬೇರು ಬಿಡಲು ಪ್ರಾರಂಭಿಸುತ್ತವೆ.  ಬೇರು ಬಿಟ್ಟ ಮೇಲೆ ಅವನ್ನು ತೆಗೆದು ಬೇರೆ ಕಡೆ ನೆಡಬೇಕು.  ಅನಂತರ ಅವುಗಳ ಮೇಲೆ ಅಪೇಕ್ಷಿತ ತಳಿಯ ಕಣ್ಣನ್ನು ಕಸಿಮಾಡಬಹುದು.

ಹಬ್ಬುವ ಜಾತಿಯ ಗುಲಾಬಿಗಳನ್ನು ವೃದ್ಧಿಮಾಡಲು ಲೇಯರಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ.

ಕಣ್ಣುಕಸಿ : ಈ ವಿಧಾನ ಬಹಳವಾಗಿ ರೂಢಿಯಲ್ಲಿದೆ.  ಅಪೇಕ್ಷಿತ ತಳಿಯ ಕಣ್ಣನ್ನು ತೆಗೆದು ಬೇರುಸಸ್ಯದ ಮೇಲೆ ಹಾಕುವುದರಿಂದ ಬೇರೆ ಬೇರೆ ಬಗೆಯ ಗಿಡಗಳನ್ನು ಪಡೆಯಬಹುದು.

ಕಣ್ಣುಕಸಿಯಲ್ಲಿ ಗಮನಿಸಬೇಕಾದ ಬಹು ಮುಖ್ಯವಾದ ಮೂರು ಅಂಶಗಳೆಂದರೆ ಬೇರು ಸಸ್ಯಗಳನ್ನು ಬೆಳೆಸುವುದು, ಕಣ್ಣಿನ ಆಯ್ಕೆ ಮತ್ತು ಕಣ್ಣನ್ನು ಕಸಿ ಮಾಡುವ ಕ್ರಮ.  ಸಾಮಾನ್ಯವಾಗಿ ವನ್ಯ ಗುಲಾಬಿ ಗಿಡದ ಕಾಂಡತುಂಡುಗಳನ್ನು ಮಡಿಗಳಲ್ಲಿ ಜುಲೈ - ಆಗಸ್ಟ್ ಅಥವಾ ಡಿಸೆಂಬರ್ - ಜನವರಿ ತಿಂಗಳುಗಳಲ್ಲಿ ನೆಡಬೇಕು.  ಅವು ಚೆನ್ನಾಗಿ ಬೇರು ಬಿಟ್ಟ ಮೇಲೆ ಅವನ್ನು 1 ಅಂತರಕ್ಕೊಂದರಂತೆ ಮಡಿಗಳಲ್ಲಿ ನೆಡಬೇಕು.  ಬೇರು ಸಸ್ಯದಿಂದ ಒಂದು ಇಲ್ಲವೆ ಎರಡು ಕೊಂಬೆಗಳನ್ನು ಬೆಳೆಯಲು ಬಿಟ್ಟು ಉಳಿದವನ್ನುತೆಗೆದುಹಾಕಬೇಕು.  ಬೇರುಸಸ್ಯದ ಕಾಂಡದ ಮೇಲೆ ಭೂ ಮಟ್ಟದಿಂದ 5.1 - 7.6 ಸೆಂಮೀ.  ಎತ್ತರದಲ್ಲಿ ಕಣ್ಣನ್ನು ಹಾಕಬೇಕು.  ಬೇರುಸಸ್ಯದ ಮೇಲಿರುವ ಇತರ ಕೊಂಬೆಗಳನ್ನು ತೆಗೆದುಹಾಕಬೇಕು.  ಕಣ್ಣನ್ನು ಬೇರು ಹಾಗೂ ಕಾಂಡದ ಕೂಡಿಕೆಯ ಸ್ಥಳದಲ್ಲೂ ಹಾಕಬಹುದು.  ಅದೇ ತಾನೇ ಹೂಗಳು ಉದುರಿಹೋದ ಬಲಿತ ಕಾಂಡದಿಂದ ಒಳ್ಳೆಯ ಕಣ್ಣನ್ನು ಆಯಬೇಕು.  ಅನಂತರ ಕಣ್ಣಿನ ರಕ್ಷಣೆಗೋಸ್ಕರ 1/2 ಉದ್ದದ ತೊಟ್ಟನ್ನು ಬಿಟ್ಟು ಕಿರು ಎಲೆಗಳನ್ನೆಲ್ಲ ತೆಗೆದುಹಾಕಬೇಕು.  2.5 ಸೆಂಮೀ.  ಉದ್ದವಿರುವ ಕಣ್ಣನ್ನು ಹರಿತವಾದ ಚಾಕುವಿನಿಂದ ಕಣ್ಣು ಮತ್ತು ತೊಗಟೆಯನ್ನು ಗುರಾಣಿಯಕಾರವಿರುವಂತೆ ಕತ್ತರಿಸಿ ತೆಗೆಯಬೇಕು.  ಬಳಿಕ ಆರಿಸಿದ ಬೇರು ಸಸ್ಯದ ಮೇಲೆ ಖಿ - ಆಕಾರಕ್ಕೆ ತೊಗಟೆಯನ್ನು ಮಾತ್ರ ಕತ್ತರಿಸಿ ಕಣ್ಣನ್ನು ಅದರಲ್ಲಿ ಕೂಡಿಸಬೇಕು.  ತರುವಾಯ ಆಲ್ಕಥೀನ್ ಸುತ್ತುಪಟ್ಟಿಯನ್ನು ಕಣ್ಣು ಹೊರಕಾಣಿಸುವಂತೆ ಬಿಟ್ಟು ಸುತ್ತಬೇಕು.  ಕಣ್ಣು ಬೆಳೆಯಲು ಪ್ರಾರಂಭಿಸಿದ ಮೇಲೆ ಕಣ್ಣಿಗಿಂತ ಮೇಲೆ ಇರುವ ಬೇರು ಸಸಿಯನ್ನು ಕತ್ತರಿಸಿ ಪಟ್ಟಿಯನ್ನು ಬಿಚ್ಚಬೇಕು.  ಕಣ್ಣು ಕಸಿ ಮಾಡಿ ಪಡೆದ ಸಸ್ಯ 6 ತಿಂಗಳ ಅನಂತರ ಬೇರೆಡೆಯಲ್ಲಿ ನೆಡಲು ಸಿದ್ಧವಾಗುತ್ತದೆ.  ಗುಲಾಬಿಗೆ ಬೆಳಕು ಅತ್ಯಾವಶ್ಯಕವಾದುದರಿಮದ ಅವನ್ನು ಬೆಳಗಿನ ಬಿಸಿಲು ಚೆನ್ನಾಗಿ ಬೀಳುವ ಸ್ಥಳಗಳಲ್ಲಿ ನೆಡಬೇಕು.  ಗುಲಾಬಿಯನ್ನು ಒಂಟಿಯಾಗಿ ಬೆಳೆಸುವುದಕ್ಕಿಂತ ಗುಂಪಾಗಿ ಮಡಿಗಳಲ್ಲಿ ಬೆಳೆಸುವುದು ಉತ್ತಮ.  ತೋಟದಲ್ಲಿ ಒಂದಕ್ಕಿಂತ ಹೆಚ್ಚು ಮಡಿಗಳಿದ್ದರೆ ಒಂದೊಂದು ಬಗೆಯನ್ನೂ ಒಂದೊಂದು ಮಡಿಯಲ್ಲಿ ಬೆಳೆಸಬೇಕು.  ಒಂದೇ ಮಡಿ ಇದ್ದರೆ ಇದೊಂದರಲ್ಲೇ ಒಂದಕ್ಕಿಂತ ಹೆಚ್ಚಿನ ಜಾತಿಗಳನ್ನು ಬೆಳೆಸಬಹುದು.  ಹೈಬ್ರಿಡ್ ಟೀ ಮತ್ತು ಫ್ಲಾರಿಬಂಡ ಜಾತಿಗಳನ್ನು ಮಾತ್ರ ಸಾಧ್ಯವಾದಷ್ಟು ಮಟ್ಟಿಗೆ ಬೇರೆ ಬೇರೆ ಪಾತಿಗಳಲ್ಲಿ ನೆಡಬೇಕು.  ಮಡಿಗಳಲ್ಲಿ ನೆಡುವಾಗ ಗಿಡದ ಎತ್ತರ ಮತ್ತು ಹೂವಿನ ಬಣ್ಣವನ್ನು ಗಮನದಲ್ಲಿಡಬೇಕು.  ಎತ್ತರವಾದ ಗಿಡಗಳನ್ನು ಹಿಂದಿನ ಸಾಲಿನಲ್ಲೂ ಕುಳ್ಳು ಬಗೆಯವನ್ನು ಮುಂದಿನ ಸಾಲಿನಲ್ಲೂ ಮಧ್ಯಮ ಎತ್ತರದ ಸಸ್ಯಗಳನ್ನು ಮಧ್ಯದ ಸಾಲಿನಲ್ಲೂ ನೆಡಬೇಕು.  ಪರಸ್ಪರ ಹೊಂದಿಕೆಯಾಗುವಂಥ ಬಣ್ಣದ ಹೂ ಬಿಡುವ ಸಸ್ಯಗಳನ್ನೇ ಬೆಳೆಸುವುದು ತೋಟದ ಸೌಂದರ್ಯದ ದೃಷ್ಟಿಯಿಂದ ಒಳ್ಳೆಯದು.

ಮಡಿಗಳನ್ನು ನೆಡುವುದಕ್ಕೆ ಕೊನೆಯ ಪಕ್ಷ 15 ದಿವಸಗಳ ಮುಂಚೆ 2 - 2  1/2 ಆಳದವರೆಗೆ ಭೂಮಿಯನ್ನು ಚೆನ್ನಾಗಿ ಅಗೆದು ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನೊಡನೆ ಮಿಶ್ರ ಮಾಡಬೇಕು.  ಗುಲಾಬಿಯನ್ನು ನೆಡಲು ಸೆಪ್ಟೆಂಬರ್ - ನವೆಂಬರ್ ಒಳ್ಳೆಯ ಶ್ರಾಯ.  ಕೆಲವನ್ನು ಫೆಬ್ರವರಿ ತಿಂಗಳವರೆಗೂ ನೆಡಬಹುದು.  ಮಡಿಗಳಲ್ಲಿ ಸಾಲಿನಿಂದ ಸಾಲಿಗೆ 2  1/2 ಮತ್ತು ಪ್ರತಿ ಸಾಲಿನಲ್ಲಿ ಸಸಿಯಿಂದ ಸಸಿಗೆ 2  1/2  ಅಂತರವನ್ನು ಕೊಟ್ಟು ನೆಡಬೇಕು.  ಪೊದೆ ಇಲ್ಲವೆ ಕುಳ್ಳು ಬಗೆಯ ಗುಲಾಬಿಯಾದರೆ 3 - 3  1/2 ಅಂತರವನ್ನೂ ಬಳ್ಳಿಜಾತಿಗಳಾದರೆ 6 - 6 1/2   ಅಂತರವನ್ನೂ ಕೊಡಬೇಕು.  ನೆಡುವುದಕ್ಕೆ ಮುಂಚೆ ಗಿಡ ಒಂದಕ್ಕೆ 226 - 228 ಗ್ರಾಂ ಮೂಳೆಪುಡಿ ಅಥವಾ ಸೂಪರ್ ಫಾಸ್ಫೇಟನ್ನು ಹಾಕಬೇಕು.  ಇದರ ಜೊತೆಗೆ 8 - 10 ಕೆಜಿ. ಕೊಟ್ಟಿಗೆ ಗೊಬ್ಬರವನ್ನೂ ಹಾಕಬೇಕು.  ಗುಲಾಬಿಯನ್ನು ನೆಡುವುದಕ್ಕೆ 3  ಸುತ್ತಳತೆಯ ಮತ್ತು 2  1/2  ಆಳದ ಗುಂಡಿಗಳನ್ನು ತೆಗೆಯಬೇಕು.  ಅನಂತರ ಗುಲಾಬಿ ಗಿಡವನ್ನು ಅದರ ಬೇರುಗಳಿಗೆ ಹಾನಿಯಾಗದಂತೆ ಬೇರುಗಳ ಸುತ್ತಲೂ ಉಂಡೆ ಮಣ್ಣಿರುವಂತೆ ಕಿತ್ತು ಗುಣಿಯ ಮಧ್ಯದಲ್ಲಿ ನೆಡಬೇಕು.  ಅನಂತರ ಮಣ್ಣನ್ನು ಹಾಕಿ ಗಿಡ ಬಿಗಿಯಾಗುವಂತೆ ಮಾಡಿ ನೀರು ಹಾಯಿಸಬೇಕು.

ಸಮರುವಿಕೆ (ಪ್ರೂನಿಂಗ್) : ಗುಲಾಬಿ ಗಿಡಗಳ ಬೆಳವಣಿಗೆ ಹುಲುಸಾಗಿರಲು, ಅವುಗಳ ಆಕಾರ ಚೆಲುವಾಗಿರಲು ಮತ್ತು ಗಿಡಗಳು ಚೆನ್ನಾಗಿ ಹೂ ಬಿಡುವಂತೆ ಮಾಡಲು ಗಿಡಗಳ ಸಮರುವಿಕೆ ರೂಢಿಯಲ್ಲಿದೆ.  ಗುಲಾಬಿ ಗಿಡಗಳನ್ನು ಸಮರುವುದಕ್ಕೆ 4 - 5 ದಿನಗಳ ಮುಂಚೆಯೇ ನೀರು ಕೊಡುವುದನ್ನು ನಿಲ್ಲಿಸಬೇಕು.  ಗುಲಾಬಿ ಸಮರಿದ 6 - 7 ವಾರಗಳ ಅನಂತರ ಹೂ ಬಿಡುತ್ತದೆ.  ಕೆಲವು ಜಾತಿಗಳನ್ನು (ಬಳ್ಳಿಯಂತೆ ಬೆಳೆಯುವ ಜಾತಿಗಳು) ಸಮರುವುದಿಲ್ಲ.  ಪೊದೆಯಾಗಿ ಬೆಳೆಯುವ ಜಾತಿಗಳಲ್ಲಿ ಒಂದೊಂದು ಕೊಂಬೆಯಲ್ಲಿ 6 - 8 ಕಣ್ಣುಗಳನ್ನು ಬಿಟ್ಟು ಕತ್ತರಿಸಬೇಕು.  ಹೊಸದಾಗಿ ನೆಟ್ಟ ಗುಲಾಬಿಯಲ್ಲಿ ತುದಿಯನ್ನು ಆಗಿಂದಾಗ್ಗೆ ಸಮರುತ್ತಿರಬೇಕು.  ಎರಡು ವರ್ಷ ವಯಸ್ಸಾದ ಗುಲಾಬಿ ಗಿಡದ ಕೊಂಬೆಗಳನ್ನು ಅರ್ಧಕ್ಕೆ ಸಮರಿ ವಯಸ್ಸಾದ ಕೊಂಬೆಗಳನ್ನು ತೆಗೆಯಬೇಕು.  ಆದರೆ ಹಾನಿಗೊಳಗಾದ, ಒಣಗಿದ ಮತ್ತು ಸತ್ತ ಕೊಂಬೆಗಳನ್ನು ತೆಗೆಯಬೇಕು.  ಸ್ಟ್ಯಾಂಡರ್ಡ್ ಮತ್ತು ಪಾಲಿ ಯಾಂತಸ್ ಜಾತಿಗಳನ್ನು ಲಘುವಾಗಿ ಸಮರುವುದು ವಾಡಿಕೆ.

ಗೊಬ್ಬರ ಕೊಡುವುದು : ಗುಲಾಬಿ ಗಿಡಗಳನ್ನು ಸಮರಿದ ಕೂಡಲೇ, ಬೇರಿನ ಸುತ್ತಲೂ 6 ಆಳಕ್ಕೆ ಮತ್ತು   1  1/2 ಸುತ್ತಳತೆಯವರೆಗೆ ಅಗೆದು ಬೇರುಗಳನ್ನು ಆರಲು ಬಿಡಬೇಕು.  3 - 4 ದಿವಸಗಳ ವರೆಗೂ ಹೀಗೆ ಬಿಟ್ಟಿದ್ದೂ ಅನಂತರ 8 - 10 ಕೆಜಿ. ಕೊಟ್ಟಿಗೆ ಗೊಬ್ಬರವನ್ನು ಅದರ ಬೇರಿನ ಸುತ್ತಲೂ ಹಾಕಿ ಮಣ್ಣಿನೊಡನೆ ಮಿಶ್ರ ಮಾಡಿ ತರುವಾಯ ಮೊದಲಿನಂತೆಯೇ ಮುಚ್ಚಿ ನೀರು ಹಾಯಿಸಬೇಕು.  ಇದಾದ 15 ದಿವಸಗಳ ಮೇಲೆ ಗಿಡ ಒಂದಕ್ಕೆ ಒಂದು ಚಹಾ ಚಮಚದಷ್ಟು ಅಮೋನಿಯಮ್ ಸಲ್ಫೇಟ್ ಮತ್ತು ಪೊಟ್ಯಾಷನ್ನು ಗಿಡದ ಬುಡದ ಸುತ್ತಲೂ ಹಾಕಿ ನೀರನ್ನು ಹಾಯಿಸಬೇಕು.  ಆದರೆ ರಾಸಾಯನಿಕ ಗೊಬ್ಬರಗಳಿಗಿಂತ ಮಾರುಕಟ್ಟೆಗಳಲ್ಲಿ ದೊರೆಯುವ, ಗುಲಾಬಿ ಗಿಡಕ್ಕೆಂದೇ ತಯಾರಿಸಿದ ಮಿಶ್ರ ಗೊಬ್ಬರವನ್ನು ಉಪಯೋಗಿಸುವುದು ಉತ್ತಮ.

ಹೂವಿನ ಕೊಯ್ಲಾದ ಬಳಿಕವೂ ರಾಸಾಯನಿಕ ಗೊಬ್ಬರಗಳನ್ನು ಮೇಲೆ ತಿಳಿಸಿದ ಪ್ರಮಾಣದಲ್ಲಿ ಕೊಡಬೇಕು.  ರಾಸಾಯನಿಕ ಗೊಬ್ಬರವನ್ನು ದ್ರಾವಣವಾಗಿಯೂ ಸಿಂಪಡಿಸಬಹುದು.  2 ಭಾಗ ಯೂರಿಯ, 1 ಭಾಗ ಡೈ ಹೈಡ್ರೊಜನ್ ಅಮೋನಿಯಂ ಫಾಸ್ಫೇಟ್, 1 ಭಾಗ ಪೊಟಾಸಿಯಂ ನೈಟ್ರೇಟ್ ಮತ್ತು 1 ಭಾಗ ಪೊಟಾಸಿಯಂ ಫಾಸ್ಫೇಟಿನ ಮಿಶ್ರಣವನ್ನು ಒಂದು ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.  ಮಿಶ್ರಣದ ಜೊತೆಯಲ್ಲಿ ಕೀಟನಾಶಕಗಳನ್ನೂ ರೋಗನಾಶಕಗಳನ್ನೂ ಸೇರಿಸಿ ಸಿಂಪಡಿಸಬಹುದು.  ಗಿಡ ಹೂ ಬಿಟ್ಟಾಗ ಮಾತ್ರ ಹೂಗಳನ್ನು ಪೂರ್ತಿ ಕೊಯ್ಯುವವರೆಗೂ ರಾಸಾಯನಿಕಗಳನ್ನು ಸಿಂಪಡಿಸಬಾರದು.  ಇತ್ತೀಚೆಗೆ ದ್ರವ ರೂಪದ ರಾಸಾಯನಿಕ ಗೊಬ್ಬರಗಳನ್ನು ಗಿಡದಮೇಲೆ ಸಿಂಪಡಿಸಿ ಅವು ಎಲೆಗಳ ಮೂಲಕ ಒಳಸೇರುವಂತೆ ಮಾಡುವ ಕ್ರಮ ಬಳಕೆಗೆ ಬರುತ್ತಿದೆ.  ಅಮೋಫಾಸ್ ಮತ್ತು ಪೊಟಾಸಿಯಮ್ ನೈಟ್ರೇಟುಗಳ ಮಿಶ್ರಣ, ಮ್ಯಾಂಗನೀಸ್ ಸಲ್ಫೇಟ್, ಮೆಗ್ನೀಷಿಯಮ್ ಸಲ್ಫೇಟ್, ಬೊರ್ಯಾಕ್ಸ್ ಮತ್ತು ಕಬ್ಬಿಣಗಳ ಮಿಶ್ರಣ, ಸೆಕ್ವೆಸ್ಟ್ರೀನ್ ಪ್ಲಸ್ ಮುಂತಾದ ರಾಸಾಯನಿಕಗಳು ಹೀಗೆ ಬಳಸಲಾಗುವ ವಸ್ತುಗಳಲ್ಲಿ ಮುಖ್ಯವಾದವು.

ಗುಲಾಬಿಗೆ ಪದೇ ಪದೇ ಕಡಿಮೆ ಪರಿಮಾಣದಲ್ಲಿ ನೀರನ್ನು ಹಾಕುವುದಕ್ಕಿಂತ ಕೆಲವು ದಿವಸಗಳಿಗೊಮ್ಮೆ ಹೆಚ್ಚಿನ ಮೊತ್ತದಲ್ಲಿ ಹಾಕುವುದು ಉತ್ತಮ.  ಚಳಿಗಾಲದಲ್ಲಿ ವಾರಕ್ಕೊಮ್ಮೆ ಹಾಯಿಸಿದರೆ ಸಾಕು.

ಗುಲಾಬಿಯ ರೊಗಗಳು ಮತ್ತು ಕೀಟ ಪಿಡುಗುಗಳು : ಗುಲಾಬಿಯ ರೋಗಗಳಲ್ಲಿ ಡೈಬ್ಯಾಕ್, ಕಪ್ಪುಮಚ್ಚೆರೋಗ, ಬೂದಿ ರೋಗ ಮತ್ತು ಬೂಷ್ಟು ರೋಗಗಳು ಮುಖ್ಯವಾದವು.

1  ಡೈಬ್ಯಾಕ್ ರೊಗ : ಗುಲಾಬಿಯನ್ನು ಸಮರಿದ ಬಳಿಕ ಕತ್ತರಿಸಿದ ತುದಿಯ ಭಾಗದಿಂದ ಹೊರಡುವ ಕೊಂಬೆಗಳು ಕಪ್ಪುಬಣ್ಣಕ್ಕೆ ತಿರುಗಿ ಒಣಗತೊಡಗುತ್ತವೆ.  ಕೆಲವು ಸಲ ಹೂಗಳನ್ನು ಎಲೆಯ ಗೆಣ್ಣಿಗಿಂತ ಬಹು ಮೇಲೆ ಕತ್ತರಿಸಿದಾಗಲೂ ಈ ರೋಗ ಬರುತ್ತದೆ.  ಗುಲಾಬಿಯನ್ನು ಸಮರಿದ ಅನಂತರ ಕತ್ತರಿಸಿದ ಭಾಗಕ್ಕೆ 4 ಭಾಗ ಕಾಪರ್ ಕಾರ್ಬೊನೇಟ್, 4 ಭಾಗ ಕೆಂಪು ಸತು ಮತ್ತು 5 ಭಾಗ ನಾರಗಸೆ ಎಣ್ಣೆಯ ಮಿಶ್ರಣವನ್ನು ಲೇಪಿಸುವುದರಿಂದ ಡೈಬ್ಯಾಕ್ ರೋಗವನ್ನು ತಡೆಯಬಹುದು.
2 ಕಪ್ಪು ಮಚ್ಚೆ ರೋಗ : ಎಲೆಗಳ ಮೇಲೆ ಸಣ್ಣ ಕಪ್ಪು ಮಚ್ಚೆಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ.  ಅನಂತರ ಮಚ್ಚೆಗಳು ವಿಸ್ತಾರಗೊಂಡು ಎಲೆ ಹಳದಿ ಬಣ್ಣಕ್ಕೆ ತಿರುಗಿ ಕೊನೆಗೆ ಎಲೆಯೇ  ಉದುರಿಹೋಗುತ್ತದೆ.  ಬೋರ್ಡೋ ದ್ರಾವಣ, ಕ್ಯಾಪ್ಟಾನ್, ಬ್ಲೈಟಾಕ್ಸ್ ಅಥವಾ ಬೇರೆ ಯಾವುದಾದರೂ ತಾಮ್ರದ ಶಿಲೀಂಧ್ರನಾಶಕವನ್ನು ಸಿಂಪಡಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು.

3  ಬೂದಿ ರೋಗ : ಈ ರೋಗ ಮೊದಲು ಬೆಳ್ಳಗೆ ಪುಡಿಯಂತೆ ಎಲೆಗಳ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.  ಇದರಿಂದ ಸಸ್ಯದ ಬೆಳವಣಿಗೆ ಕುಂಠಿತವಾಗುವುದು.  ರಾತ್ರಿ ತಂಪಾದ ಹವಾಗುಣ, ಹಗಲು ಬಿಸಿಯಾದ ಹವಾಗುಣವಿದ್ದರೆ ಈ ರೋಗ ಬಹು ಬೇಗ ಹರಡುತ್ತದೆ.  ಗಂಧಕದ ಪುಡಿಯನ್ನು ಸಿಂಪಡಿಸುವುದರಿಂದ ಇದನ್ನು ತಡೆಗಟ್ಟಬಹುದು.

4 ಬೂಷ್ಟು ರೋಗ : ರೋಗಪೀಡಿತ ಎಲೆಯ ತೊಟ್ಟು ಮತ್ತು ತಳ ಭಾಗದಲ್ಲಿ ಸಾಸಿವೆಯಂತೆ ಕೆಂಪುಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿದ ಮಚ್ಚೆಗಳಿರುತ್ತವೆ.  ಮಚ್ಚೆಗಳು ಬರುಬರುತ್ತ ಕಪ್ಪಗಾಗುತ್ತವೆ.  ಈ ರೋಗ ಬಹು ಬೇಗ ಎಲೆಗಳಿಂದ ಕಾಂಡಕ್ಕೆ ಹರಡುತ್ತವೆ. 1 ಔನ್ಸ್ ತಾಮ್ರದ ಸಲ್ಫೇಟನ್ನು 1ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸುವುದರಿಂದ ಬೂಷ್ಟು ರೋಗವನ್ನು ನಿಯಂತ್ರಿಸಬಹುದು.  

5 ಹಳದಿ ರೋಗ : ಸಾಮಾನ್ಯವಾಗಿ ಮಣ್ಣಿನಲ್ಲಿ ಸುಣ್ಣದ ಅಂಶ ಹೆಚ್ಚಾಗಿದ್ದರೆ ಈ ರೋಗ ಬರುತ್ತದೆ.  ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದೇ ಇದರ ಮುಖ್ಯ ಲಕ್ಷಣ.  ಒಂದು ಔನ್ಸ್ ಕಬ್ಬಿಣದ ಸಲ್ಫೇಟನ್ನು 1 ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ ರೋಗವನ್ನು ಹತೋಟಿಯಲ್ಲಿಡಬಹುದು.

ಕೀಟ ಪಿಡುಗುಗಳು : ಗುಲಾಬಿಗೆ ಕಂಬಳಿಹುಳು, ನುಸಿ, ಏಫಿಡ್ಸ್, ಮೂತಿ ಹುಳು, ಕೆಂಪು ಶಲ್ಕ ಕೀಟ, ಉಣ್ಣಿ, ಗೆದ್ದಲು ಮುಂತಾದ ಕೀಟಗಳು ಅಂಟುತ್ತವೆ.

ಕಂಬಳಿಹುಳು : ಗುಲಾಬಿ ಗಿಡವನ್ನು ಸಮರಿದ ತರುವಾಯ ಹೊಸ ಚಿಗುರು ಬರುವಾಗ ಇದು ಕಾಣಿಸಿಕೊಳ್ಳುತ್ತದೆ.  ಇದು ಸಣ್ಣಗೆ ಸುಮಾರು 1  ಉದ್ದವಿದ್ದು ರಾತ್ರಿಸಮಯದಲ್ಲಿ ಚಿಗುರನ್ನು ತಿಂದು ಹಾಕಿ, ಹಗಲು ಹೊತ್ತು ಎಲೆಯ ತಳಾಭಾಗದಲ್ಲಿ ಅಡಗಿರುತ್ತದೆ.  1 ಔನ್ಸ್ ಲೆಡ್ ಆರ್ಸಿನೇಟನ್ನು 1 ಗ್ಯಾಲನ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹುಳುವನ್ನು ನಿವಾರಿಸಬಹುದು.

ನುಸಿ : ಸಾಮಾನ್ಯವಾಗಿ ಬೇಸಗೆಯಲ್ಲಿ ಇವುಗಳ ಹಾವಳಿ ಹೆಚ್ಚು.  ಇವು ಬಹುಸಂಖ್ಯಾತವಾಗಿದ್ದು ಬೆಳೆಯುವ ಎಳೆಯ ಭಾಗವನ್ನು ತಿನ್ನುತ್ತವೆ.  ಮತ್ತು ಎಲೆಯ ಪತ್ರಹರಿತ್ತನ್ನು ಹೀರುತ್ತವೆ.  ಇವುಗಳ ಹತೋಟಿಗೆ 0.1% ಬಿ. ಎಚ್. ಸಿ. ಯನ್ನು ಅಥವಾ ಫಾಲಿಡಾಲ್ ಪುಡಿಯನ್ನು ಸಿಂಪಡಿಸಬೇಕು.

ಏಫಿಡ್ಸ್ : ಸಣ್ಣ ಗಾತ್ರದ ಈ ಕೀಟಗಳು ಹೂವಿನ ಮೊಗ್ಗು ಮತ್ತು ಬೆಳೆಯುವ ತುದಿಯನ್ನು ತಿಂದು ಹಾನಿ ಮಡುತ್ತವೆ.  0.1%  ಬಿ. ಎಚ್. ಸಿ. ಯನ್ನು ಇಲ್ಲವೆ ನಿಕೋಟಿನಿಕ್ ಸಲ್ಫೇಟ್ ಅಥವಾ ಫಾಲಿಡಾಲ್ ಪುಡಿಯನ್ನು ಸಿಂಪಡಿಸುವುದರಿಂದ ಈ ಕೀಟವನ್ನು ತಡೆಗಟ್ಟಬಹುದು.

ಮೂತಿಹುಳು : ಪ್ರೌಢಕೀಟಗಳು ಎಲೆಗಳನ್ನು ತಿನ್ನುತ್ತವೆ.  ಡಿಂಬಗಳು ಬೇರಿಗೆ ಹಾನಿಯನ್ನುಂಟುಮಾಡುತ್ತವೆ.  0.1% ಬಿ. ಎಚ್. ಸಿ. ದ್ರಾವಣವನ್ನು ಸಿಂಪಡಿಸುವುದು ಅಥವಾ 10% ಬಿ. ಎಚ್. ಸಿ ಪುಡಿಯನ್ನು ಎರಚುವುದರಿಂದ ಇವನ್ನು ಹತೋಟಿಯಲ್ಲಿಡಬಹುದು.

ಕೆಂಪು ಶಲ್ಕ ಕೀಟಗಳು : ಈ ಕೀಟಗಳು ಗುಂಪುಗುಂಪಾಗಿ ಎಳೆಯ ಕಾಂಡವನ್ನು ಮುತ್ತಿಕೊಂಡಿದ್ದು ರಸವನ್ನು ಹೀರುತ್ತವೆ.  ಇದರಿಂದಾಗಿ ಗಿಡ ಒಣಗಿ ಹೋಗುತ್ತದೆ.  0.025%  ಪ್ಯಾರಾತಿಯಾನನ್ನು ಸಿಂಪಡಿಸುವುದರ ಮೂಲಕ ಇವನ್ನು ತಡೆಗಟ್ಟಬಹುದು.

ಗೆದ್ದಲು : ಇವು ಸಾಮಾನ್ಯವಾಗಿ ಎಲ್ಲ ತರದ ಮಣ್ಣಿನಲ್ಲಿ ಇರುವುವಾದರು ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಹೆಚ್ಚಾಗಿರುತ್ತವೆ. ಹೊಸದಾಗಿ ನೆಟ್ಟ ಅಥವಾ ಆರೋಗ್ಯವಾಗಿಲ್ಲದ ಸಸ್ಯಗಳು ಇವುಗಳ ಹಾವಳಿಗೆ ತುತ್ತಾಗುವುವು.  ಇವು ಭೂಮಿಯ ಒಳಗಡೆ ಇದ್ದು ಗುಲಾಬಿಯ ತೊಗಟೆಯನ್ನು ತಿನ್ನತ್ತವಲ್ಲದೆ ಕಾಂಡದ ಮೇಲೆ ಸಣ್ಣ ಸಣ್ಣ ರಂಧ್ರಗಳನ್ನು ಕೊರೆಯುತ್ತವೆ ಕೂಡ.  ಇದರಿಂದ ಗಿಡ ಇದ್ದಕ್ಕಿದ್ದಂತೆ ಬಾಡಿದಂತೆ ಕಾಣುತ್ತದೆ.  ಗುಲಾಬಿ ಗಿಡಗಳನ್ನು ನೆಡುವುದಕ್ಕೆ ಮುಂಚೆ ಮಡಿಗಳನ್ನು ಸುಮಾರು 2  ಆಳಕ್ಕೆ ಅಗೆಯಬೇಕು.  ಕಾಂಡದ ಮೇಲಿರುವ ರಂಧ್ರಗಳಿಗೆ ತಲಾ 1/3 ಔನ್ಸಿನಷ್ಟು ಕಾರ್ಬನ್ ಡೈಸಲ್ಫೇಟ್ ದ್ರಾವಣವನ್ನು ಸುರಿದು ರಂಧ್ರಗಳನ್ನು ಮುಚ್ಚಬೇಕು.  ದ್ರಾವಣವನ್ನು ಬೇರುಗಳ ಮೇಲೆ ನೇರವಾಗಿ ಹಾಕಬಾರದು.
(ಎಂ.ಎಚ್.ಎಂ)

ಗುಲಾಬಿಯ ಉಪಯೋಗಗಳು : ಗುಲಾಬಿ ಬರಿಯ ಅಲಂಕಾರಸಸ್ಯವೊಂದೇ ಅಲ್ಲದೆ ಇನ್ನಿತರ ರೀತಿಗಳಿಂದಲೂ ಉಪಯುಕ್ತವೆನಿಸಿದೆ.  ಇದರಿಂದ ಪನ್ನೀರು, ಅತ್ತರು, ಕೇಶತೈಲ, ಗುಲ್‍ಖನ್, ಮುರಬ್ಬ, ಪೋಪರಿ ಎನ್ನಲಾಗುವ ಒಂದು ಖಾದ್ಯವಸ್ತು - ಇವನ್ನು ಮಾಡಲಾಗುತ್ತದೆ.  ಪನ್ನೀರು ಮಾಡಲು ಒಳ್ಳೆಯ ಜಾತಿಯ, ಮಧುರವಾಸನೆಯುಳ್ಳ ಗುಲಾಬಿ ಹೂಗಳನ್ನು ಬಟ್ಟಿಯಿಳಿಸಲಾಗುತ್ತದೆ.  ಇದು ಬಲು ತಂಪುಕಾರಕವೆಂದು ಹೆಸರಾಗಿದೆ.  ಷರಬತ್ತು, ಕಣ್ಣಿಗೆ ಹಾಕುವ ಔಷಧಿದ್ರವ ಮುಂತಾದವನ್ನು ಮಾಡಲು ಇದನ್ನು ಬಳಸುತ್ತಾರೆ.  ಅನೇಕ ಸಿಹಿ ತಿಂಡಿಗಳಿಗೆ ಹಾಗೂ ಪೆಪ್ಪರುಮಿಂಟುಗಳಿಗೆ ವಾಸನೆ ಕಟ್ಟಲು ಇದನ್ನು ಉಪಯೋಗಿಸುವುದಿದೆ.  ಪನ್ನೀರನ್ನು ನೇರವಾಗಿ ಸುಗಂಧ ದ್ರವ್ಯವಾಗಲ್ಲದೆ ಗುಲಾಬಿ ತೈಲ ತಯಾರಿಕೆಯಲ್ಲೂ ಬಳಸುತ್ತಾರೆ.  ಪನ್ನೀರನ್ನು ಮಣ್ಣಿನ ಇಲ್ಲವೆ ಲೋಹದ ಅಗಲವಾದ ಪಾತ್ರೆಗಳಲ್ಲಿ ಸಂಗ್ರಹಿಸಿ ದೂಳು ಹೋಗದಂತೆ ಪಾತ್ರೆಗಳನ್ನು ತೆಳುವಾದ ಮಸ್ಲಿನ್ ಬಟ್ಟೆಯಿಂದ ಮುಚ್ಚಿ ರಾತ್ರಿಯ ತಂಗಾಳಿಗೆ ಒಡ್ಡಿ ಇಡಲಾಗುತ್ತದೆ.  ಬೆಳಗಿನ ಜಾವ ಪನ್ನೀರಿನ ಮೇಲೆ ಸುಗಂಧಪೂರಿತವಾದ ಬೆಣ್ಣೆಯಂಥ ಪದಾರ್ಥದ ಕಣಗಳು ತೇಲುತ್ತಿರುತ್ತದೆ.  ಇವೇ ಗುಲಾಬಿ ತೈಲದ ಕಣಗಳು.  ಇವನ್ನು ಎಚ್ಚರಿಕೆಯಿಂದ ಹೊರತೆಗೆದು ಗಾಜಿನ ಸೀಸೆಗಳಲ್ಲಿ ಸಂಗ್ರಹಿಸಲಾಗುತ್ತದೆ.  ದಿನದ ಉಷ್ಣತೆ ಹೆಚ್ಚಿದಂತೆ ಇದು ಕರಗಿ ದ್ರವರೂಪಕ್ಕೆ ಬರುತ್ತದೆ.  ಹೊಸದಾಗಿದ್ದಾಗ ವರ್ಣರಹಿತವಾಗಿರುವ ಇದು ವರ್ಷ ಕಳೆದಂತೆ ಕಂದುಬಣ್ಣಕ್ಕೆ ತಿರುಗುತ್ತದೆ.  ಗುಲಾಬಿ ತೈಲವನ್ನು ಮೊಗಲ್ ರಾಣಿ ನೂರ್‍ಜಹಾನ್ ಕಂಡುಹಿಡಿದಳೆಂದು ಹೇಳಲಾಗಿದೆ.  ಗುಲಾಬಿ ತೈಲವನ್ನೇ  ಹೋಲುವ ಗುಲಾಬಿ ಅತ್ತರನ್ನು ತಯಾರಿಸುವ ಕ್ರಮ ಬೇರೆ.  ಗುಲಾಬಿ ಹೂಗಳನ್ನು ಬಟ್ಟಿಯಿಳಿಸುವಾಗ ಹೊರಬರುವ ಸುವಾಸನಾಯುಕ್ತಾ ಹಬೆಯನ್ನು ಗಂಧದೆಣ್ಣೆಯ ಮೂಲಕ ಹಾಯಿಸಿ ಅತ್ತರನ್ನು ಪಡೆಯಲಾಗುತ್ತದೆ.

ಉತ್ತರಪ್ರದೇಶದ ಕನೂಜ್, ಜಾನ್‍ಪುರ, ಗಾಜಿóಪುರಗಳು ಗುಲಾಬಿ ತೈಲೋದ್ಯಮಕ್ಕೆ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದವು.  ಈಗಲೂ ಅಲಿಘರ್ ಜಿಲ್ಲೆಯ ಬರ್ಮಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗಾಜಿಪುರ, ಕಾನ್ಪುರ, ಸಹಾರನ್‍ಪುರಗಳು ಗುಲಾಬಿತೈಲದ ಉತ್ಪಾದನೆಗೆ ಹೆಸರಾಗಿವೆ.  ಆದ್ರೆ ಬಲ್ಗೇರಿಯ, ಫ್ರಾನ್ಸ್ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ಆಧುನಿಕ ಸಾಧನಗಳನ್ನು ಬಳಸಿ ಗುಲಾಬಿ ತೈಲವನ್ನು ಬೃಹತಪ್ರಮಾಣದಲ್ಲಿ ತಯಾರಿಸಲಾಗುತ್ತಿದ್ದು ಈ ಉದ್ದಿಮೆಯಲ್ಲಿ ಈ ದೇಶಗಳು ಅಗ್ರಮಾನ್ಯವೆನಿಸಿವೆ.  ಗುಲಾಬಿ ತೈಲದ ತಯಾರಿಕೆಯಲ್ಲಿ ಬಳಸಲಾಗುವ ಗುಲಾಬಿ ಬಗೆಗಳಲ್ಲಿ ಅತಿಮುಖ್ಯವಾದವು ರೋಸó ಡಮಾಸ್ಕೀನ, ರೋಸ ಸೆಂಟಿಫೋಲಿಯ ಮತ್ತು ಮತ್ತು ರೋಸ ಆಲ್ಬ ಎಂಬವು.  ಭಾರತದಲ್ಲಿ ಎಡ್ವರ್ಡ್ ಮತ್ತು ಬಸೋರ ಎಂಬ ಬಗೆಗಳು ಈ ದೃಷ್ಟಿಯಿಂದ ಮುಖ್ಯವೆನಿಸಿವೆ.  ಗುಲಾಬಿಯಿಂದ ಸÁ್ವಸನೆಯುಳ್ಳ ಕೇಶ ತೈಲವನ್ನೂ ತಯಾರಿಸುವುದಿದೆ.  ಶುಚಿಗೊಳಿಸಿದ ಎಳ್ಳನ್ನೂ ಗುಲಾಬಿ ದಳಗಳನ್ನೂ ಪದರ ಪದರವಾಗಿ ಒಂದರ ಮೇಲೊಂದು ಹರಡಿ ಒತ್ತಡಕ್ಕೊಳಪಡಿಸಲಾಗುತ್ತದೆ.  ಗುಲಾಬಿಯ ವಾಸನೆಯೆಲ್ಲ ಎಳ್ಳಿಗೆ ವರ್ಗಾವಣೆಯಗುತ್ತದೆ.  ಪ್ರತಿನಿತ್ಯ ಹೊಚ್ಚ ಹೊಸ ಗುಲಾಬಿ ದಳಗಳನ್ನು ಹರಡುತ್ತ ಇದ್ದು ಎಳ್ಳು ಪೂರ್ಣವಾಗಿ ಗುಲಾಬಿ ವಾಸನೆಯನ್ನು ಹೀರಿಕೊಳ್ಳುವಂತೆ ಮಾಡಿ ಅನಂತರ ಅದನ್ನು ಹಿಂಡಿ ಸುವಾಸಿತ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ.  ಶುದ್ಧವಾದ ಎಣ್ಣೆಗೆ ನೇರವಾಗಿ ಗುಲಾಬಿ ದಳಗಳನ್ನು ಹಾಕಿ ಗುಲಾಬಿಯ ಸೌರಭವನ್ನು ಅದು ಹೀರುವಂತೆ ಮಾಡಬಹುದು.

ಎಡ್ವರ್ಡ್ ಬಗೆಯ ಗುಲಬಿ ದಳಗಳನ್ನು ಬಿಳಿಯ ಸಕ್ಕರೆಯೊಂದಿಗೆ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ, ಕೊಂಚ ಜೇನುತುಪ್ಪ ಸೇರಿಸಿ, ಕುಟ್ಟಿ, ಗುಲಖನ್ ತಯಾರಿಸಲಾಗುತ್ತದೆ.  ಕೆಲವರು ಇದನ್ನು ಪೂರ್ತ ಜೇನುತುಪ್ಪದಲ್ಲೇ ಮಾಡುತ್ತಾರೆ.  ಗುಲಖನ್ ಬಲು ಒಳ್ಳೆಯ ಶಕ್ತಿವರ್ಧಕ, ಲಘುವಿರೇಚಕ.  ಬಾಯಿ ಹುಣ್ಣಿಗೆ ಒಳ್ಳೆಯ ಮದ್ದು.  ಗುಲಾಬಿ ದಳಗಳನ್ನು ಒಣಗಿಸಿಟ್ಟುಕೊಂಡಿದ್ದು ಬೇಕೆಂದಾಗ ನೀರು, ಸಕ್ಕರೆಯೊಂದಿಗೆ ಬೆರೆಸಿ ತಂಪುಪಾನೀಯವನ್ನು ತಯಾರಿಸುವ ಕ್ರಮವೂ ಇದೆ.

ಪಾಶ್ಚಾತ್ಯ ದೇಶಗಳಲ್ಲಿ ಗುಲಾಬಿಯಿಂದ ಸುಗಂಧದ್ರವ್ಯಗಳು, ಪನ್ನೀರು ಮುಂತಾದವನ್ನು ಮಾಡುವುದಲ್ಲದೆ ದಳಗಳಿಂದ ಒಂದು ಬಗೆಯ ಮುರಬ್ಬವನ್ನೂ ದಾಲ್ಚಿನ್ನಿ, ಲವಂಗ, ಜಾಪತ್ರೆ, ನಿಂಬೆ ಹಣ್ಣಿನ ಒಣ ಸಿಪ್ಪೆ, ಜಿರ್ಯಾನಿಯಮ್ ಎಣ್ಣೆ, ಬರ್ಗಮಾಟ್ ಎಣ್ಣೆ, ಲ್ಯಾವೆಂಡರ್ ಪುದೀನ, ಅಡಿಗೆ ಉಪ್ಪು, ಆರಿಸ್ ಗಿಡದ ಬೇರು - ಇವನ್ನೆಲ್ಲ ಮಿಶ್ರ ಮಾಡಿ ಪೋಪರಿ ಎಂಬ ಖಾದ್ಯವೊಂದನ್ನು ತಯಾರಿಸುತ್ತಾರೆ.

ಗುಲಾಬಿಯ ಕಾಯಿಗಳು ಸಿ ವಿಟಮಿನ್ನಿನ ಒಳ್ಳೆಯ ಆಗರವೆನ್ನಲಾಗಿದೆ.  ಪ್ರತಿ 100 ಗ್ರಾಮ್ ಕಾಯಿಗಳಿಂದ 150 ಮಿಗ್ರಾಮ್ ವಿಟಮಿನ್ನನ್ನು ಪಡೆಯಬಹುದು.  

ಗುಲಾಬಿಗೆ ಔಷಧೀಯ ಗುಣಗಳೂ ಇವೆ.  ಇದರ ದಳಗಳನ್ನು ಜ್ವರದ ತಾಪವನ್ನು ಶಮನಗೊಳಿಸಲೂ ಪಚನಕಾರಿಯಾಗಿಯೂ ಪ್ರತಿಬಂಧಕ, ತಂಪುಕಾರಕಗಳಾಗಿಯೂ ಬಳಸುತ್ತಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ